ಬಸ್ ತಂಗುದಾಣ ನಿರ್ಮಾಣ ಪರಿಶೀಲನೆ

 ಕನ್ನೆಪ್ಪಾಡಿಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಪಂಚಾಯಿತಿ ಪದಾಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಜಂಟಿ ಸ್ಥಳ ಪರಿಶೀಲನೆ ನಡೆಯಿತು. ಪ್ರಮುಖರಾದ ಶಂಕರ ಡಿ., ಅಶ್ವಿನಿ ಕೆ.ಎಂ., ಹಮೀದ್ ಕೆಡೆಂಜಿ ಮೊದಲಾದವರಿದ್ದರು.
ಕನ್ನೆಪ್ಪಾಡಿಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಪಂಚಾಯಿತಿ ಪದಾಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಜಂಟಿ ಸ್ಥಳ ಪರಿಶೀಲನೆ ನಡೆಯಿತು. ಪ್ರಮುಖರಾದ ಶಂಕರ ಡಿ., ಅಶ್ವಿನಿ ಕೆ.ಎಂ., ಹಮೀದ್ ಕೆಡೆಂಜಿ ಮೊದಲಾದವರಿದ್ದರು.
Published on
ಬದಿಯಡ್ಕ: ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ಬಸ್ ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಲಕ್ಷಣ ಕಾಣಿಸುತ್ತಿದೆ. ಕನ್ನೆಪ್ಪಾಡಿಯಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಪಂ ಆಡಳಿತ ಮಂಡಳಿ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ತಂಗುದಾಣ ನಿರ್ಮಿಸಲು ಜಾಗವನ್ನು ಪಂಚಾಯಿತಿ ಪದಾಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿದರು.

ಕನ್ನೆಪ್ಪಾಡಿ ಜಂಕ್ಷನ್‌ನಲ್ಲಿ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಸರಿಯಾದ ನಿಲ್ದಾಣವಿಲ್ಲದೆ, ಮಳೆ, ಬಿಸಿಲಿಗೆ ರಸ್ತೆ ಬದಿಯಲ್ಲೇ ಅಂಗಡಿ ಮುಂಭಾಗದಲ್ಲಿ ಕಾಯಬೇಕಾದ ಅನಿವಾರ್ಯತೆ ಇತ್ತು. ಈ ಪರಿಸರದಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು ಎನ್ನುವ ಪ್ರಯಾಣಿಕರು, ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಸಾಧ್ಯತೆ ಕಾಣಿಸುತ್ತಿದೆ.

ಅಧಿಕಾರಿಗಳ ಜಂಟಿ ಭೇಟಿ

ಸುರಕ್ಷಿತವಾದ ಜಾಗ ಗುರುತಿಸುವ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಪಂಚಾಯಿತಿ ಆಡಳಿತ ಮಂಡಳಿಗೆ ಅಗತ್ಯ ಸಲಹೆ-ಸೂಚನೆ ನೀಡಿದರು. ಸ್ಥಳ ಪರಿಶೀಲನೆಯಲ್ಲಿ ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ವಾರ್ಡ್ ಸದಸ್ಯ ಶ್ಯಾಮಪ್ರಸಾದ ಸರಳಿ, ಶ್ಯಾಮಪ್ರಸಾದ್ ಮಾನ್ಯ, ಗ್ರಾಪಂ ಕಾರ್ಯದರ್ಶಿ ಮನೋಜ್ ಕುಮಾರ್, ಆರ್‌ಟಿಒ ಅಧಿಕಾರಿಗಳು, ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕ ಭಾಗಕ್ಕೆ ಪ್ರಯಾಣಿಸುವ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಇದಾಗಿತ್ತು. ಮಳೆ-ಬಿಸಿಲಿನಲ್ಲಿ ಪ್ರಯಾಣಿಕರು ಪಡುತ್ತಿದ್ದ ಕಷ್ಟ ಮನಗಂಡು ಪಂಚಾಯಿತಿ ಆಡಳಿತ ಮಂಡಳಿ ಯೋಜನೆ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ. ಭವಿಷ್ಯದ ರಸ್ತೆ ವಿಸ್ತರಣೆ ಮತ್ತು ಸಂಚಾರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಜಂಟಿ ಪರಿಶೀಲನೆ ನಡೆಸಲಾಗಿದೆ. ಕಾನೂನು ಪ್ರಕ್ರಿಯೆ ಶೀಘ್ರವಾಗಿ ಮುಗಿಸಲಾಗುವುದು.

— ಶಂಕರ ಡಿ.ಅಧ್ಯಕ್ಷ ಬದಿಯಡ್ಕ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net