ಬಸ್ ಪ್ರಯಾಣಿಕರ ಪರದಾಟ

ದೇರಳಕಟ್ಟೆಯಲ್ಲಿ ಶಾಮಿಯಾನದ ತಾತ್ಕಾಲಿಕ ಬಸ್ ತಂಗುದಾಣ.
ದೇರಳಕಟ್ಟೆಯಲ್ಲಿ ಶಾಮಿಯಾನದ ತಾತ್ಕಾಲಿಕ ಬಸ್ ತಂಗುದಾಣ.
Published on
ಅನ್ಸಾರ್ ಇನೋಳಿ ಉಳ್ಳಾಲ
ಒಂದು ಭಾಗದಲ್ಲಿ ರಸ್ತೆ ಅಗಲೀಕರಣಗೊಂಡು ಸುಸಜ್ಜಿತ ಸಂಚಾರಕ್ಕೆ ಹಾದಿ ಸುಗಮವಾಗಿರುವುದು ವಾಹನ ಸವಾರರಿಗೆ ಖುಷಿ ನೀಡಿದೆ. ಆದರೆ, ಇದೇ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಮಾತ್ರ ಬಿಸಿಲಿನಲ್ಲಿ ಒಣಗುತ್ತಾ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆರವುಗೊಳಿಸಲಾದ ಬಸ್ ತಂಗುದಾಣಗಳು ಮರು ನಿರ್ಮಾಣವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ತೊಕ್ಕೊಟ್ಟು ಜಂಕ್ಷನ್‌ನಿಂದ ಅಸೈಗೋಳಿವರೆಗೆ ಹಾಗೂ ಕಂಬಳಪದವಿನಿಂದ ಮುಡಿಪುವರೆಗೆ ರಸ್ತೆ ಚತುಷ್ಪಥಗೊಂಡು ವರ್ಷಗಳೇ ಕಳೆದಿವೆ. ಪ್ರತಿ ಮಳೆಗಾಲದಲ್ಲಿ ರಸ್ತೆ ಹೊಂಡ ಬಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು, ಬಳಿಕ ತೇಪೆ ಕಾರ್ಯ ನಡೆಯುವುದು ಇಲ್ಲಿ ಸಾಮಾನ್ಯ. ಆದರೆ, ರಸ್ತೆ ವಿಸ್ತರಣೆ ವೇಳೆ ತೆರವುಗೊಳಿಸಲಾದ ಹಲವು ಬಸ್ ತಂಗುದಾಣಗಳನ್ನು ಪುನಃ ನಿರ್ಮಿಸಲು ಅಧಿಕಾರಿಗಳು ಮರೆತಿದ್ದಾರೆ.

ದೇರಳಕಟ್ಟೆ, ಅಸೈಗೋಳಿಯಲ್ಲಿ ಸಮಸ್ಯೆ

ದೇರಳಕಟ್ಟೆಯಲ್ಲಿ ಕೊಣಾಜೆ, ಮುಡಿಪು ಕಡೆಗೆ ಸಾಗುವಲ್ಲಿ ಬೆಳ್ಮ ಗ್ರಾಪಂ ಹಳೆಯ ಕಾಲದ ಸಣ್ಣದೊಂದು ತಂಗುದಾಣವಿದೆ. ಆದರೆ ಮಂಗಳೂರು ಕಡೆಗೆ ಸಂಚರಿಸುವ ಭಾಗದಲ್ಲಿದ್ದ ತಂಗುದಾಣವನ್ನು ರಸ್ತೆ ಕಾಮಗಾರಿಗಾಗಿ ತೆರವುಗೊಳಿಸಲಾಗಿತ್ತು. ಪ್ರಸ್ತುತ ಅಲ್ಲಿ ಕೇವಲ ಒಂದು ತುಂಡು ಶಾಮಿಯಾನ ಹಾಕಿ ‘ತಾತ್ಕಾಲಿಕ ತಂಗುದಾಣ’ ಎಂದು ಹೆಸರಿಸಲಾಗಿದೆಯೇ ಹೊರತು ಶಾಶ್ವತ ವ್ಯವಸ್ಥೆಯಾಗಿಲ್ಲ. ಅಸೈಗೋಳಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆ

ಯೇನೆಪೊಯ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಗಳಿರುವ ಪ್ರದೇಶದಲ್ಲಿ ಪ್ರತಿದಿನ ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ನೂರಾರು ರೋಗಿಗಳು ಸಂಚರಿಸುತ್ತಾರೆ. ಇವರೆಲ್ಲರೂ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಸರಿಯಾದ ತಂಗುದಾಣವೇ ಇಲ್ಲದಿರುವುದು ದುರದೃಷ್ಟಕರ. ಕುತ್ತಾರ್ ಪದವು ಜಂಕ್ಷನ್‌ನಲ್ಲಿ ತಂಗುದಾಣವಿದ್ದರೂ, ಅಲ್ಲಿ ಬಸ್‌ಗಳು ನಿಲ್ಲದ ಕಾರಣ ಅದು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿದೆ.

ದೇರಳಕಟ್ಟೆ ಸೇರಿದಂತೆ ಮುಖ್ಯ ಜಂಕ್ಷನ್‌ಗಳಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಹಲವರು ಆಸಕ್ತಿ ತೋರಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶೌಚಗೃಹ ಸಹಿತ ತಂಗುದಾಣ ನಿರ್ಮಿಸಲು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ. ನಿಟ್ಟೆ ಸಂಸ್ಥೆ ಮೂಲಕ ಇದರ ವಿನ್ಯಾಸ ರಚಿಸಲು ಮನವಿ ಮಾಡಲಾಗಿದೆ.

ತೊಕ್ಕೊಟ್ಟಿನಿಂದ ಅಸೈಗೋಳಿವರೆಗಿನ ರಸ್ತೆ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವುದು ಸ್ಪೀಕರ್ ಅವರ ದೂರದೃಷ್ಟಿಯ ಫಲವಾಗಿದೆ. ಆದರೆ ಮಳೆಗಾಲ ಆರಂಭವಾಗುವ ಮೊದಲೇ ಪ್ರಮುಖ ಜಂಕ್ಷನ್‌ಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿದರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net