ಬಸ್- ಲಾರಿ ಡಿಕ್ಕಿಯಾಗಿ ಚಾಲಕರಿಗೆ ಗಾಯ

 ಗುರುಪುರ- ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣ ಮುಂಭಾಗ ಬುಧವಾರ ಮಧ್ಯಾಹ್ನ ಲಾರಿ- ಬಸ್ ಡಿಕ್ಕಿಯಾಗಿರುವುದು.
ಗುರುಪುರ- ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣ ಮುಂಭಾಗ ಬುಧವಾರ ಮಧ್ಯಾಹ್ನ ಲಾರಿ- ಬಸ್ ಡಿಕ್ಕಿಯಾಗಿರುವುದು.
Published on
ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ-ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣ ಮುಂಭಾಗ ಬುಧವಾರ ಮಧ್ಯಾಹ್ನ ಲಾರಿ- ಬಸ್ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿ ಎರಡೂ ವಾಹನಗಳ ಚಾಲಕರು ಗಂಭೀರ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಕಾರ್ಕಳದತ್ತ ತೆರಳುತ್ತಿದ್ದ ಬಸ್, ಮಂಗಳೂರು ಕಡೆಗೆ ಹೋಗುತ್ತಿದ್ದ 16 ಚಕ್ರಗಳ ಲಾರಿ ಬೆಳ್ಳಿಬೆಟ್ಟು ತಿರುವಿನಲ್ಲಿ ಡಿಕ್ಕಿಯಾಗಿದೆ. ಬಸ್ ಮತ್ತು ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಚಾಲಕರು ಹೊರಬರಲಾಗದೆ ನರಳಾಡುತ್ತಿದ್ದು, ಸ್ಥಳೀಯರು ಗ್ಯಾಸ್ ಕಟ್ಟರ್ ಮೂಲಕ ಲಾರಿ ಹಾಗೂ ಬಸ್‌ನ ಕೆಲವು ಭಾಗ ಕಟ್ ಮಾಡಿ ಹೊರ ತೆಗೆದಿದ್ದಾರೆ. ಇಬ್ಬರ ಕಾಲುಗಳು ಮುರಿದಿದ್ದು, ತೀವ್ರ ರಕ್ತಸಿಕ್ತಗೊಂಡಿದ್ದರು. ಬಸ್‌ನಲ್ಲಿದ್ದ ಇತರ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಡ್ಯಾಶ್‌ಬೋರ್ಡ್‌ನಲ್ಲಿತ್ತು 6 ಲಕ್ಷ ರೂ.!

ಚಾಲಕರನ್ನು ರಕ್ಷಿಸುವ ಸಂದರ್ಭ ಗ್ಯಾಸ್ ಕಟ್ಟರ್ ಮೂಲಕ ಬಸ್‌ನ ಒಂದು ಭಾಗ ಕಟ್ ಮಾಡುವಾಗ ಡ್ಯಾಶ್ ಬೋರ್ಡ್‌ನಲ್ಲಿ ಸುಮಾರು 6 ಲಕ್ಷ ರೂ. ನೋಟಿನ ಬಂಡಲ್ ಪತ್ತೆಯಾಗಿದೆ. ಅದನ್ನು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ರಫೀಕ್ ಗುರುಪುರ ಸ್ಥಳದಲ್ಲೇ ಇದ್ದ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ಈ ವಿಷಯ ದೃಢಪಡಿಸಿದ್ದಾರೆ. ಚಾಲಕರ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರಾದ ರಫೀಕ್, ಶಿವರಾಮ, ರವೂಫ್, ಫಾಝಿಲ್ ಮತ್ತಿತರರು ಸಹಕರಿಸಿದರು. ಗುರುಪುರದ ಸೇವಾ ಬ್ರಿಗೇಡ್ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net