ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಚೇರಿ ದಿನನಿತ್ಯ ಜನರಿಂದ ತುಂಬಿದ್ದರೂ ಇಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡರೆ ಪರ್ಯಾಯ ವ್ಯವಸ್ಥೆ ಇಲ್ಲದಾಗಿದೆ. ಇರುವ ಎರಡೂ ಜನರೇಟರ್ ಯಾವುದೇ ಪ್ರಯೋಜನಕ್ಕಿಲ್ಲದಂತಾಗಿದ್ದು, ನಿತ್ಯ ಜನರು ಅಗತ್ಯ ಕೆಲಸಕ್ಕಾಗಿ ಕಾದು ವಾಪಸ್ ಹೋಗಬೇಕಾದ ಪರಿಸ್ಥಿತಿ ಇದೆ.
ಬೆಳ್ತಂಗಡಿ ತಾಲೂಕು ಕಚೇರಿಯ ನೂತನ ಕಟ್ಟಡ 2018ರಲ್ಲಿ ಉದ್ಘಾಟನೆಗೊಂಡು ಕೇವಲ 8 ವರ್ಷಗಳಾಯಿತಷ್ಟೆ. ಉದ್ಘಾಟನಾ ಸಂದರ್ಭದಲ್ಲಿ ಎರಡು ಜನರೇಟರ್‌ಗಳಿದ್ದವು. ಈಗಲೂ ಇದೆಯಾದರೂ ಎರಡೂ ಜನರೇಟರ್‌ಗಳು ಯಾವುದೇ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ವಿದ್ಯುತ್ ಕೈಕೊಟ್ಟರೆ ಕಂಪ್ಯೂಟರ್‌ಗಳು ಬಂದ್ ಆಗುತ್ತಿದ್ದು, ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಕಚೇರಿ ವೆಚ್ಚದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆಗೊಳಿಸಿದರೂ ಅಗತ್ಯ ಕಾರ್ಯಗಳಿಗೆ ಉಪಯೋಗವಾಗುತ್ತಿಲ್ಲ.
ಐದಾರು ವಷರ್ಗಳಿಂದ ಜನರೇಟರ್ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ತಾಲೂಕು ಕಚೇರಿಯ ಬದಿಯಲ್ಲೇ ಇದ್ದರೂ ಇದರ ನಿರ್ವಹಣೆಯತ್ತ ಇಲ್ಲಿನ ಅಧಿಕಾರಿಗಳು ತಮಗೂ , ಜನರೇಟರ್‌ಗೂ ಯಾವುದೇ ರೀತಿಯ ಸಂಬಂಧ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಮೂಲೆಯಲ್ಲಿ ಬಿದ್ದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಎರಡೂ ಜನರೇಟರ್‌ಗಳು ಜನರ ಉಪಯೋಗಕ್ಕೆ ಲಭ್ಯವಾಗಲಿ ಎಂದು ಜನರು ಆಗ್ರಹಿಸಿದ್ದಾರೆ.