ಹೈಕಮಾಂಡ್ ಮೆಚ್ಚಿಸಲು ಸಂಪ್ರದಾಯ ಭಗ್ನ

ಸುನೀಲ್ ಕುಮಾರ್ ಒತ್ತಾಯ
ಸುನೀಲ್ ಕುಮಾರ್ ಒತ್ತಾಯ
Published on
ಕಾರ್ಕಳ: ರಾಜ್ಯ ಸರ್ಕಾರ ತನ್ನ ಒಳ ಜಗಳ ಹಾಗೂ ಹೈಕಮಾಂಡ್ ಮೆಚ್ಚಿಸುವುದಕ್ಕೆ ವಿಧಾನ ಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯವನ್ನು ಭಗ್ನಗೊಳಿಸಲು ಹೊರಟಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಕನಿಷ್ಠ ಹತ್ತು ದಿನಗಳ ಕಾಲ ಕಲಾಪ ನಡೆಸಲಾಗುತ್ತಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶಾಸಕರು ಕ್ಷೇತ್ರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹಾಗೂ ಅದಕ್ಕೆ ಮುಖ್ಯಮಂತ್ರಿಗಳು ಸದನದಲ್ಲೇ ಉತ್ತರ ಕೊಡುವುದು ಸದನದ ರೀತಿ. ಆದರೆ ಜಿ ರಾಮ್ ಜಿ ವಿಧೇಯಕದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ನೆಪದಲ್ಲಿ ಜಂಟಿ ಅಧಿವೇಶನ ಸೀಮಿತಗೊಳಿಸಲಾಗಿದೆ ಎಂದರು.
ಈ ವಿಧೇಯಕದ ಬಗ್ಗೆ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆ ನಡೆಸುವುದಕ್ಕೆ ಬಿಜೆಪಿ ಸಿದ್ಧ. ಆದರೆ ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಅಂಗೀಕರಿಸಿ ರಾಜಕೀಯ ಹೋರಾಟ ಮಾಡಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ. ಶಾಸನ ಸಭೆಯ ರೀತಿ ರಿವಾಜುಗಳು ಕಾಂಗ್ರೆಸ್ ಹೈಕಮಾಂಡ್ ಆಶಯಕ್ಕೆ ತಕ್ಕಂತೆ ನಡೆಸುವುದು ಸರಿ ಅಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸುವ ಜತೆಗೆ ನಾಡಿನ ಜ್ವಲಂತ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net