ಬಾಲಕನಿಂದ ಜೇನುಗೂಡು ತೆರವು

 ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇಣುಗೂಡನ್ನು ಸುರಕ್ಷಿತವಾಗಿ ತೆರವುಗೊಳಿಸಿದ 8ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ.
ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇಣುಗೂಡನ್ನು ಸುರಕ್ಷಿತವಾಗಿ ತೆರವುಗೊಳಿಸಿದ 8ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇನುಗೂಡನ್ನು ಇತರ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ 8ನೇ ತರಗತಿಯಲ್ಲಿ ಕಲಿಯುತ್ತಿರುವ 13ರ ಹರೆಯದ ವಿದ್ಯಾರ್ಥಿಯೇ ಸುರಕ್ಷಿತವಾಗಿ ತೆರವುಗೊಳಿಸಿ ಅಚ್ಚರಿ ಮೂಡಿಸಿದ್ದಾನೆ.
ಶಾಲಾವರಣದ ಪೊಟರೆಯಿಂದ ಹೊರಬರುತ್ತಿದ್ದ ಜೇಣುನೊಣಗಳು ಕ್ರೀಡಾಂಗಣದಲ್ಲಿ ಆಡುತ್ತಿದ್ದ ಮಕ್ಕಳಿಗೆ ಕಚ್ಚಿರುವ ಘಟನೆಗಳು ನಡೆದಿತ್ತು. ಇದರಿಂದ ಕಳವಳಕ್ಕೀಡಾದ ಶಾಲಾಡಳಿತ ಬೆಂಕಿಯ ಹೊಗೆಯ ಮೂಲಕ ಜೇನು ಸಂತತಿಯನ್ನು ತೆರವುಗೊಳಿಸಲು ನಿರ್ಧರಿಸಿತ್ತು. ಇದನ್ನು ಅರಿತ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ, ಬೆಂಕಿಯ ಹೊಗೆ ಹಾಕಿ ಜೇನುನೊಣಗಳನ್ನು ತೆರವುಗೊಳಿಸಿದರೆ ನೊಣಗಳು ಸಾಯುವ ಸಂಭವವಿದೆ. ಅವಕಾಶ ಕೊಟ್ಟರೆ ತಾನೇ ಜೇನುನೊಣಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವುದಾಗಿ ವಿನಂತಿಸಿದ್ದ.
ಆದರೆ ವಿದ್ಯಾರ್ಥಿಯಿಂದ ಅಪಾಯಕಾರಿ ಜೇನುನೊಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಒಪ್ಪಿಗೆ ನೀಡಲು ಶಾಲಾಡಳಿತ ಹಿಂದೇಟು ಹಾಕಿತ್ತು. ಜೇನುನೊಣಗಳ ಬಗ್ಗೆ ಈಗಾಗಲೇ ಸಂಶೋಧನಾ ನಿರತನಾಗಿರುವ ಗವಿನ್‌ಗೆ ಅವಕಾಶ ನೀಡುವಂತೆ ಪಾಲಕರೇ ಕೇಳಿದ್ದರಿಂದ ಶಾಲೆಯವರು ಒಪ್ಪಿಗೆ ನೀಡಿದರು.
ಸುರಕ್ಷಿತವಾಗಿ ಸ್ಥಳಾಂತರ: ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಲು ಮುಂದಾದ ಗವಿನ್‌ಗೆ ಅಚ್ಚರಿ ಕಾದಿತ್ತು. ಪೊಟರೆಯಲ್ಲಿ ಸಣ್ಣ ಪ್ರಮಾಣದ ಜೇನುನೊಣಗಳಿರಬಹುದೆಂದು ಅಂದಾಜಿಸಿದ್ದ ಆತನಿಗೆ ಹಲವು ಹಂತಗಳಲ್ಲಿ ಗೂಡುಕಟ್ಟಿಕೊಂಡಿದ್ದ ಜೇನುತುಪ್ಪ ಭರಿತ ದೊಡ್ಡ ಪ್ರಮಾಣದ ಗೂಡು ಕಾಣಿಸಿತ್ತು. ಆದರೆ ಭಯಪಡದ ಗವಿನ್ ಯಾವೊಂದೂ ಜೇನುನೊಣಗಳಿಗೆ ಹಾನಿಯಾಗದಂತೆ ತಾನು ಮೊದಲೇ ತಂದಿರಿಸಿದ್ದ ಗೂಡಿಗೆ ಜೇನುನೊಣಗಳನ್ನು ಸ್ಥಳಾಂತರಿಸಿ, ಗೂಡಿನಲ್ಲಿದ್ದ ಜೇನುತುಪ್ಪ ಸಂಗ್ರಹಿಸಿದ. ಅಲ್ಲದೆ ಕ್ರೀಡಾಂಗಣದಲ್ಲಿರುವ ಸಪೋಟ ಮರದಲ್ಲಿದ್ದ ಕೋಲುಜೇನನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿದ. ವಿದ್ಯಾರ್ಥಿಯ ಈ ಸಾಹಸಕ್ಕೆ ಶಾಲಾಡಳಿತ ಮೆಚ್ಚುಗೆ ಸೂಚಿಸಿತು.

ರಾಷ್ಟ್ರಮಟ್ಟದ ಅವಾರ್ಡ್ ವಿಜೇತ

ಜೇನು ಕೃಷಿಕರಿಗೆ ಉಪಯುಕ್ತವಾಗುವ, ಸುರಕ್ಷಿತವಾಗಿ ಜೇನುಗೂಡಿನೊಳಗಿನ ವಿದ್ಯಮಾನಗಳನ್ನು ತಿಳಿಯುವ ಸಾಧನವನ್ನು ಗವಿನ್ ರೇಶಿಮೆ ಈಗಾಗಲೇ ಸಂಶೋಧಿಸಿದ್ದಾನೆ. ಈತನ ‘ಹೈವ್ ಗಾಡ್ 360’ ಸ್ಮಾರ್ಟ್ ಇಲೆಕ್ಟ್ರಿಕ್ ಸ್ಮೋಕರ್ ವಿತ್ ಹೈವ್ ಮಾನಿಟರಿಂಗ್ ಸಿಸ್ಟಮ್ ಎಂಬ ವಿಜ್ಞಾನ ಮಾದರಿ ಸಂಶೋಧನೆಗೆ ನವಾಚರ 26 ಐರಿಸ್ ಜೂನಿಯರ್ ಸ್ಪರ್ಧೆಯಲ್ಲಿ ಟಾಪ್ ತ್ರಿ ಇನ್ನೋವೇಟರ್ ಅವಾರ್ಡ್ ಲಭಿಸಿರುವುದನ್ನು ಸ್ಮರಿಸಬಹುದಾಗಿದೆ. ಗವಿನ್ ರೇಶಿಮೆ ಇರ್ದೆ ಬೆಟ್ಟಂಪಾಡಿ ನಿವಾಸಿ ಶಿವಪ್ರಸಾದ್-ರೇಣುಕಾ ದಂಪತಿ ಪುತ್ರ.
ಪೋಟೋ ಪೈಲ್ ನೇಮ್ : ಯುಪಿಪಿ_ಜೂನ್26_1
ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇಣುಗೂಡನ್ನು ಸುರಕ್ಷಿತವಾಗಿ ತೆರವುಗೊಳಿಸಿದ 8ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net