ಮಲ್ಪೆ ಬಂದರಿನಲ್ಲಿ ಬೋಟ್​ ಕಾರ್ಮಿಕನ ಕೊಲೆ

ಆರೋಪಿ ಗೋವಿಂದರಾಜ್​
ಆರೋಪಿ ಗೋವಿಂದರಾಜ್​
Published on
ಉಡುಪಿ: ಮಲ್ಪೆ ಪಡುಕೆರೆ ಧಕ್ಕೆಯಲ್ಲಿ ನಡೆದಿದ್ದ ಬೋಟ್​ ಕಾರ್ಮಿಕನನ್ನು ಸಹೋದ್ಯೋಗಿ ಕೊಲೆ ಮಾಡಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಅಭಿಷೇಕ್​ ಮೃತ ಯುವಕ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೆರೆ ನಿವಾಸಿ ಗೋವಿಂದರಾಜ್​ ಆರೋಪಿ. 

ಸೋಮವಾರ ರಾತ್ರಿ ಪಡುಕೆರೆ ದಕ್ಕೆಯಲ್ಲಿದ್ದ ಮೀನುಗಾರಿಕಾ ಬೋಟಿನಲ್ಲಿ ಗೋವಿಂದರಾಜ್​ ಹಾಗೂ ಅಭಿಷೇಕ್​ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ವೈಷಮ್ಯದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನ ಜಾವ ಆರೋಪಿ ಗೋವಿಂದರಾಜ್​ ಬೋಟ್​ನಲ್ಲಿಯೇ ಅಭಿಷೇಕ್​ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ.  

ರೈಲ್ವೇ ನಿಲ್ದಾಣದಲ್ಲಿ ಆರೋಪಿ ಸೆರೆ
ಕೊಲೆ ನಡೆದ ಕುರಿತು ಮಾಹಿತಿ ತಲುಪುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಮಲ್ಪೆ ಪೊಲೀಸರು ಆರೋಪಿಯ ಪತ್ತೆಗೆ ಉಡುಪಿ ಭಾಗದಲ್ಲಿ ಜಾಲ ಬೀಸಿದ್ದು, ಆರೋಪಿ ಗೋವಿಂದರಾಜ್​ ಉಡುಪಿಯಿಂದ ಹೈದರಾಬಾದ್​ ಅಥವಾ ಮುಂಬೈಗೆ ಪರಾರಿಯಾಗುವ ಉದ್ದೇಶದಿಂದ ರೈಲ್ವೇ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಗೋವಿಂದರಾಜ್​ ಕಳೆದ ಸುಮಾರು 15 ವರ್ಷಗಳಿಂದ ತನ್ನ ಸ್ವಂತ ಮನೆಗೆ ಹೋಗದೇ ಮುಂಬೈ, ಹೈದರಾಬಾದ್​ ಸೇರಿದಂತೆ ವಿವಿಧ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್​ ಠಾಣೆಯಲ್ಲಿ  ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net