ರಸ್ತೆಯಲ್ಲೇ ದೋಣಿಗಳ ಸಂಚಾರ!

 ಕುಂದಾಪುರ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದು.
ಕುಂದಾಪುರ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದು.
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಕಳೆದ 45 ವರ್ಷಗಳಿಂದ ಪ್ರತಿ ಬಾರಿಯ ಮಳೆಗಾಲದಲ್ಲಿ ಸುದ್ದಿಯಾಗುತ್ತಿರುವ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಗಳು ಈ ಬಾರಿಯೂ ಸುದ್ದಿಯಾಗುತ್ತಿದೆ. ರಸ್ತೆಯ ಎಲ್ಲೆಂದರಲ್ಲಿ ಮಳೆ ನೀರು ನಿಂತಿದ್ದು, ‘ಸರ್ವೀಸ್ ರಸ್ತೆಯಲ್ಲಿ ದೋಣಿಗಳ ಸಂಚಾರಕ್ಕೂ ಅವಕಾಶವಿದೆ’ ಎಂದು ಅಣಕಿಸುವ ಪೋಸ್ಟರ್‌ಗಳು ಇಲ್ಲಿನ ಅವ್ಯವಸ್ಥೆಗೆ ಕೈಗನ್ನಡಿಯಾಗಿವೆ.

ರಸ್ತೆಗಿಂತ ಎತ್ತರದಲ್ಲಿ ಚರಂಡಿ!:

ನಗರದ ಶಾಸೀ ಸರ್ಕಲ್ ಎದುರಿನಲ್ಲಿ ಸಾಗುವ ಫ್ಲೈ ಓವರ್‌ನ ಇಕ್ಕೆಲಗಳಲ್ಲಿ ನಿರ್ವಾಣವಾಗಿರುವ ಸರ್ವೀಸ್ ರಸ್ತೆಗಳು ಒಂದಲ್ಲ ಒಂದು ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಸರ್ವೀಸ್ ರಸ್ತೆಯ ಮೇಲ್ಭಾಗದಲ್ಲಿ ಸಂಗ್ರಹವಾಗುವ ಭಾರಿ ಪ್ರವಾಣದ ನೀರು ಹರಿದು ಹೋಗಲು ನಿರ್ಮಾಣವಾದ ಕಾಂಕ್ರೀಟ್ ತೋಡುಗಳು ಅವೈಜ್ಞಾನಿಕವಾಗಿದ್ದು, ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆ ನೀರಿನ ಹರಿವಿಗೆ ತೊಡಕಾಗಿದೆ.

ಸಣ್ಣ ಮಳೆಗೂ ಹೊಳೆ

ಸರ್ವೀಸ್ ರಸ್ತೆ ಮೇಲ್ಮೈ ಜಲಮಟ್ಟಕ್ಕೆ ಸವಾನವಾಗಿರದೆ ಇರುವುದರಿಂದ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ವಿನಾಯಕ ಟಾಕೀಸ್‌ವರೆಗೂ ಎಲ್ಲೆಂದರಲ್ಲಿ ಬೃಹದಾಕಾರದ ಗುಂಡಿಗಳಾಗುತ್ತಿವೆ. ಫ್ಲೈ ಓವರ್ ಹಾಗೂ ಎಂಬ್ಯಾಕ್ಮೆಂಟ್ ಮೇಲಿನ ರಸ್ತೆಗಳಲ್ಲಿ ಸಂಗ್ರಹವಾಗುವ ನೀರು, ಸರ್ವೀಸ್ ರಸ್ತೆಗೆ ಹರಿದು ಬರುವುದರಿಂದ ಸಣ್ಣ ಮಳೆಗೂ ಸರ್ವೀಸ್ ರಸ್ತೆ ಹೊಳೆಯಂತಾಗುತ್ತಿದೆ.

4 ವರ್ಷಗಳಿಂದ ಪರಿಹಾರವಿಲ್ಲ

ಸರ್ವೀಸ್ ರಸ್ತೆ ಮೇಲೆ ನೀರು ನಿಂತು ಸಮಸ್ಯೆಗಳು ಉಲ್ಭಣವಾಗಿ ವಾಧ್ಯಮ ಹಾಗೂ ಸಾವಾಜಿಕ ಜಾಲತಾಣಗಳಲ್ಲಿ ಸುದ್ದಿಯಾದಾಗ ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳನ್ನು ನಯವಾದ ವಾತುಗಳಿಂದ ನಂಬಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಅಲ್ಲಿಂದ ತೆರಳಿದ ಬಳಿಕ ತಾವು ನೀಡಿದ ಆಶ್ವಾಸನೆಗಳನ್ನೇ ಮರೆಯುತ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಪರಿಶೀಲಿಸಿದ್ದರೂ ಕಳೆದ 4 ವರ್ಷಗಳಿಂದ ಇಲ್ಲಿನ ಸಮಸ್ಯೆ ಸುಖಾಂತ್ಯವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಸಂಸದರಿಂದ 3 ಬಾರಿ ಪರಿಶೀಲನೆ

ಬಸ್ರೂರು ಮೂರುಕೈ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹೋಟೆಲ್ ಯುವ ಮನೀಶ್, ಟಿ.ಟಿ.ರಸ್ತೆ ಅಂಡರ್ ಪಾಸ್ ಹಾಗೂ ಶಾಂತಿ ನಿಕೇತನ್ ಬಳಿಯಲ್ಲಿನ ಸರ್ವೀಸ್ ರಸ್ತೆಯಲ್ಲಿ ನಿಂತಿರುವ ನೀರು ಹೆದ್ದಾರಿ ಇಲಾಖೆಯ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ. ಹಿಂದೆ ಸಚಿವ ಹಾಗೂ ಮೇಲ್ಮನೆಯ ಪ್ರತಿಪಕ್ಷ ನಾಯಕರಾಗಿದ್ದಾಗ, ಸ್ವ ಪಕ್ಷದ ಮುಖಂಡರಿಂದಲೇ ಹೆದ್ದಾರಿ ಸಮಸ್ಯೆ ಕುರಿತು ಮುಜುಗರಕ್ಕೆ ಒಳಗಾಗಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈಗಾಗಲೇ ಮೂರು ಬಾರಿ ವೀಕ್ಷಣೆ ವಾಡಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರೂ ಪ್ರತಿಫಲ ಮಾತ್ರ ಶೂನ್ಯ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುರ್ತು ಸ್ಪಂದಿಸದ ಸ್ಥಳೀಯಾಡಳಿತ

ಹೆದ್ದಾರಿ ಕಾಮಗಾರಿಗೆಂದು ಬಂದಿದ್ದ ಜೇಸಿಬಿ ಯಂತ್ರಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಆರೋಪವೂ ಇದೆ. ಪುರಸಭೆ ಅಧ್ಯಕ್ಷರು ಸ್ವತಃ ಹೋಗಿ ಕಾದರೂ ಪಂಚಾಯಿತಿ ಕಡೆಯಿಂದ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಕಾಮಗಾರಿ ನಡೆಯಲಿಲ್ಲ. ಫ್ಲೈ ಓವರ್ ಮೇಲೆ ವಾಹನಗಳು ಚಲಿಸಿದರೆ ಸರ್ವೀಸ್ ರಸ್ತೆಯಲ್ಲಿ ಹೋಗುವ ಎಲ್ಲ ವಾಹನಗಳ ಮೇಲೂ ಕೆಸರಿನ ಅಭಿಷೇಕವಾಗುತ್ತದೆ ಎಂಬುದು ವಾಹನ ಸವಾರರ ದೂರು.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುವಾಗಲೇ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸಮರ್ಪಕ ಚರಂಡಿ ಹಾಗೂ ನೀರು ಹರಿವಿನ ವ್ಯವಸ್ಥೆ ವಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ ಆ ಸಲಹೆಗಳನ್ನು ನಿರ್ಲಕ್ಷಿಸಿದ ಪರಿಣಾಮ ಪ್ರತಿ ಮಳೆಗಾಲದಲ್ಲೂ ರಸ್ತೆ ಜಲಾವೃತಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

— ರಾಜೇಶ ಕಾವೇರಿ ಕುಂದಾಪುರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net