ಗಂಗೊಳ್ಳಿಯಲ್ಲಿ ಬೋಟ್ ಮುಳುಗಡೆ

 ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬೋಟ್ ಮುಳುಗಿರುವುದು.
ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬೋಟ್ ಮುಳುಗಿರುವುದು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಆ.26ರಂದು ಸಂಭವಿಸಿದ ಪರ್ಸಿನ್ ಬೋಟ್ ದುರಂತದ ನೆನಪು ವಾಸುವ ಮುನ್ನವೇ ಇನ್ನೊಂದು ಬೋಟ್ ಅವಘಡ ಸಂಭವಿಸಿದೆ. ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಗ್ಗೆ ಮೀನುಗಾರಿಕೆ ತೆರಳಿದ್ದ ‘ಮಂಜುನಾಥ ಸಾಗರ’ ಹೆಸರಿನ ಬೋಟ್ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮುಳುಗಿದ್ದು, ಬೋಟ್‌ನಲ್ಲಿದ್ದ 6 ಮಂದಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಕುಂಭಾಶಿ ಕೊರವಡಿಯ ಸಂತೋಷ್ ಎ. ಎಂಬುವರ ಮೀನುಗಾರಿಕೆ ಬೋಟ್ 6 ಮಂದಿ ಮೀನುಗಾರರೊಂದಿಗೆ ಬುಧವಾರ ಗಂಗೊಳ್ಳಿಯಿಂದ ತೆರಳಿತ್ತು. ಗಂಗೊಳ್ಳಿ ಬಂದರಿನಿಂದ ಅನತಿ ದೂರದಲ್ಲಿ ಅಳಿವೆ ಪ್ರದೇಶದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ಮೀನುಗಾರರು ಕೂಡಲೇ ಗಂಗೊಳ್ಳಿ ಬಂದರಿಗೆ ವಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಸ್ಥಳೀಯ ಮೀನುಗಾರರು ಪರ್ಸಿನ್ ಬೋಟ್‌ನೊಂದಿಗೆ ಸಮುದ್ರಕ್ಕೆ ತೆರಳಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಮುಳುಗಡೆಯಾಗುತ್ತಿದ್ದ ಬೋಟ್ ಅನ್ನು ಇನ್ನೊಂದು ಬೋಟಿನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಗಿದೆ. ಬೋಟ್ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ಬಲೆ ಮತ್ತಿತರ ಸಲಕರಣೆಗಳು ಸಂಪೂರ್ಣ ಹಾನಿಯಾಗಿವೆ.

ರಕ್ಷಣೆಗೆ ಬಾರದ ಕರಾವಳಿ ಕಾವಲು ಪಡೆ

ಅಳಿವೆಯಲ್ಲಿ ಬೋಟ್ ಮುಳುಗಡೆಯಾಗುತ್ತಿರುವುದರ ಬಗ್ಗೆ ಸ್ಥಳೀಯ ಕರಾವಳಿ ಕಾವಲು ಪೊಲೀಸ್ ಠಾಣೆಗೆ ವಾಹಿತಿ ನೀಡಿದ್ದರೂ, ಅಪಾಯದಲ್ಲಿದ್ದ ಮೀನುಗಾರರ ರಕ್ಷಣೆಗೆ ಕರಾವಳಿ ಕಾವಲು ಪೊಲೀಸರು ಧಾವಿಸಲಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ತುರ್ತು ಸಂದರ್ಭ ನೆರವಿಗೆ ಧಾವಿಸಲೆಂದೇ ಕರಾವಳಿ ಕಾವಲು ಪೊಲೀಸ್ ಠಾಣೆಗೆ ನೀಡಲಾಗಿದ್ದ ಬೋಟ್ ನಿಷ್ಕ್ರಿಯಗೊಂಡು ಬಂದರಿನಲ್ಲಿ ಲಂಗರು ಹಾಕಿದೆ. ಮೀನುಗಾರಿಕೆ ಪ್ರಾರಂಭವಾಗಿ ತಿಂಗಳು ಕಳೆದರೂ ಬೋಟ್ ಸಜ್ಜುಗೊಳಿಸದ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net