ನಾಡದೋಣಿ ಮೀನುಗಾರಿಕೆ ವಿಳಂಬ

ಮರವಂತೆ ಹೊರಬಂದರಿನಲ್ಲಿ ನಿಲ್ಲಿಸಿರುವ ದೋಣಿಗಳು.
ಮರವಂತೆ ಹೊರಬಂದರಿನಲ್ಲಿ ನಿಲ್ಲಿಸಿರುವ ದೋಣಿಗಳು.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಜೂನ್‌ನಲ್ಲಿ ನಿರೀಕ್ಷಿತ ಪ್ರವಾಣದಲ್ಲಿ ಮಳೆ ಬಾರದೆ ಬರಗಾಲದ ಪರಿಸ್ಥಿತಿ ನಿರ್ವಾಣವಾಗಿರುವ ಹಿನ್ನೆಲೆಯಲ್ಲಿ ಮತ್ತು ಸಮುದ್ರದಲ್ಲಿ ತೂಫಾನ್ ಆಗದಿರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ನಡೆಯುವುದು ಅನುವಾನ ಎಂದು ಹೇಳಲಾಗುತ್ತಿದೆ. ಹವಾವಾನ ಮತ್ತು ಸಮುದ್ರದ ಪರಿಸ್ಥಿತಿ ನೋಡಿಕೊಂಡು ಜುಲೈ 15ರ ನಂತರ ಕುಂದಾಪುರ, ಬೈಂದೂರು ಭಾಗದ ನಾಡದೋಣಿ ಮೀನುಗಾರರು ಕಡಲಿಗಿಳಿಯುವ ಸಾಧ್ಯತೆ ಇದೆ.
ಜೂನ್‌ನಲ್ಲಿ ಉತ್ತಮ ಮಳೆಯಾಗುತ್ತಿದ್ದರೆ ಇಷ್ಟೊತ್ತಿಗಾಗಲೆ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗುತ್ತಿದ್ದರು. ಆದರೆ ಈ ಬಾರಿ ಇನ್ನೂ ಮಳೆಗಾಲ ಪ್ರಾರಂಭವಾಗಿಲ್ಲ. ಮಳೆ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಹವಾವಾನ ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿಲ್ಲ. ಇದರಿಂದ ಮಳೆಗಾಲದಲ್ಲಿ ಮೀನುಗಾರರು ನೆಚ್ಚಿಕೊಂಡಿರುವ ಸಾಂಪ್ರದಾಯಿಕ ಮೀನುಗಾರಿಕೆ ಆರಂಭ ವಿಳಂಬಗೊಂಡಿದೆ.
ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.

ತೂಫಾನ್ ಏಳದೆ ಪ್ರಯೋಜನ ಶೂನ್ಯ

ಕಡಲಾಳದಲ್ಲಿ ತೂಫಾನ್ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಇದರಿಂದ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಜೂನ್‌ನಲ್ಲಿ ಮಳೆಯಾಗದೆ ಇರುವುದರಿಂದ ಹಾಗೂ ಹವಾವಾನ ಪೂರಕವಾಗದೆ ಇರುವುದರಿಂದ ನಾಡದೋಣಿ ಮೀನುಗಾರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಸಮುದ್ರದಲ್ಲಿ ತೂಫಾನ್ ಏಳದೆ ಮೀನುಗಾರರು ಕಡಲಿಗಿಳಿದರೂ ಅದರಿಂದ ಹೇರಳವಾಗಿ ಮೀನುಗಳು ಸಿಗುವುದಿಲ್ಲ.

ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿಲ್ಲ. ಇನ್ನೊಂದೆಡೆ ಸೀಮೆಎಣ್ಣೆ ಸಮಸ್ಯೆ ಮೀನುಗಾರರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ನಾಡದೋಣಿ ಮೀನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಸರ್ಕಾರದ ನೀತಿಗಳಿಂದ ಮೀನುಗಾರರು ಬೀದಿ ಪಾಲಾಗುವ ಪರಿಸ್ಥಿತಿ ನಿರ್ವಾಣಗೊಂಡಿದೆ. ಇದರಿಂದ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಬಡ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಸರ್ಕಾರ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

— ಯಶವಂತ ಖಾರ್ವಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂ ಗಂಗೊಳ್ಳಿ ವಲಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net