ಉಡುಪಿಗೆ ಬಿ.ಎಲ್​. ಸಂತೋಷ್​, ವಿಜಯೇಂದ್ರ ಭೇಟಿ

ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿದರು. ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್​ ನಾಯಕ್​ ಇದ್ದರು.
ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿದರು. ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್​ ನಾಯಕ್​ ಇದ್ದರು.
Published on

* ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾಹಿತಿ

* ಜಿಲ್ಲಾ ಕಚೇರಿಯಲ್ಲಿ ಪದಾಧಿಕಾರಿಗಳೊಂದಿಗೆ ಸಭೆ

ಉಡುಪಿ: ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಪದಾಧಿಕಾರಿಗಳೊಂದಿಗೆ ಮಂಗಳವಾರ (ಡಿ.23) ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಮನೆಗಳ ಹಸ್ತಾಂತರ ಕಾರ್ಯಕ್ರಮ

ಡಿ.25ರಂದು ಬೆಳಗ್ಗೆ 10ಕ್ಕೆ ಬೈಂದೂರಿನಲ್ಲಿ ಹೆಗ್ಗುಂಜೆ ರಾಜೀವ್​ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ನಡೆಯುವ 14 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿ.ಎಲ್​. ಸಂತೋಷ್​ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬೈಂದೂರಿನಲ್ಲಿ ನಡೆಯಲಿರುವ 'ಸಂಸದ್​ ಖೇಲ್​' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5ಕ್ಕೆ ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಶಾಸಕ ವಿ.ಸುನೀಲ್​ ಕುಮಾರ್​ ನೇತೃತ್ವದಲ್ಲಿ ಕಾರ್ಕಳದಲ್ಲಿ ನಡೆಯುವ "ಅಟಲ್​ ಸ್ಮರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾಪು ಕಡಲ ಪರ್ಬ

ಡಿ.27ರಂದು ಸಂಜೆ 7ಕ್ಕೆ ಬಿಜೆಪಿ ಕಾಪು ಮಂಡಲದ ವತಿಯಿಂದ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ನೇತೃತ್ವದಲ್ಲಿ ಕಾಪು ಕಡಲ ಕಿನಾರೆಯಲ್ಲಿ ನಡೆಯಲಿರುವ 'ಕಾಪು ಕಡಲ ಪರ್ಬ' ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಿದ್ದಾರೆ. ಡಿ.28ರಂದು ಬಿಜೆಪಿ ಕಾರ್ಕಳ ಮಂಡಲದ ನೇತೃತ್ವದಲ್ಲಿ ಸಚ್ಚರಿಪೇಟೆಯಲ್ಲಿ ಪ್ರಧಾನಿ ಮೋದಿ ಅವರ 'ಮನ್​ ಕೀ ಬಾತ್​'ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಿದ್ದಾರೆ ಎಂದರು.

ಸಕ್ರಿಯವಾಗಿ ಪಾಲ್ಗೊಳ್ಳಿ

ಡಿ.24ರಂದು ಸಂಜೆ 6ಕ್ಕೆ ಬಿಜೆಪಿ ಉಡುಪಿ ನಗರ ಮಂಡಲದ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ಅಂತರ್​ ರಾಜ್ಯ ಮಟ್ಟದ ಹೊನಲು ಬೆಳಕಿನ 'ಅಟಲ್​ ಟ್ರೋಫಿ' ವಾಲಿಬಾಲ್​ ಪಂದ್ಯ ನಡೆಯಲಿದೆ. ಡಿ.25ರಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಸಹಯೋಗದೊಂದಿಗೆ ಬ್ರಹ್ಮಾವರ ನಂದಿಗುಡಿಯ ಬಳಿ ಪ.ಜಾ. ಸಮುದಾಯದ 14 ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ ನಡೆಯಲಿದೆ. ಜ.17ರಂದು ಕರಾವಳಿಯ ನಾಡಹಬ್ಬವಾದ ಉಡುಪಿ ಶಿರೂರು ಮಠದ ಪರ್ಯಾಯೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಕ್ಷದ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕುತ್ಯಾರು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​ ಮಾತನಾಡಿ, ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ವಿಸತ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net