ಅಗ್ನಿಶಾಮಕ ದಳದ ಬಲವರ್ಧನೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಮನವಿ
ಬಿಜೆಪಿ ಯುವಮೋರ್ಚಾ ವತಿಯಿಂದ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
Published on:
Copied
Follow Us
ಉಡುಪಿ: ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಅಗತ್ಯ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಉಡುಪಿ ನಗರದ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಮನವಿ ಮಾಡಿದ್ದರೂ ಈವರೆಗೂ ಪೂರಕವಾಗಿ ಸ್ಪಂದಿಸಿಲ್ಲ. ಮಣಿಪಾಲ ಹಾಗೂ ಬ್ರಹ್ಮಾವರ ಭಾಗಕ್ಕೆ ಅಗ್ನಿಶಾಮಕ ದಳದ ಬೇಡಿಕೆಗೆ ಇದೀಗ ಮಂಜೂರಾತಿ ನೀಡಿದ್ದರೂ, ಬ್ರಹ್ಮಾವರ ಅಗ್ನಿಶಾಮಕದಳ ಘಟಕಕ್ಕೆ ಇನ್ನು ಅನುದಾನ ಮಂಜೂರಾಗಿಲ್ಲ. ಅಗ್ನಿಶಾಮಕ ದಳದಲ್ಲಿ 15 ವರ್ಷ ಹಳೆಯದಾದ ವಾಹನಗಳು ಸೇವೆಗೆ ಲಭ್ಯವಿಲ್ಲದ ಕಾರಣ ಹೊಸ ವಾಹನಗಳನ್ನು ಸರ್ಕಾರ ಕೂಡಲೇ ನೀಡಬೇಕು. ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಗ್ನಿಶಾಮಕ ದಳ ಅತ್ಯಂತ ಅಗತ್ಯವಾಗಿದ್ದು, ಸರ್ಕಾರ ಇನ್ನಾದರೂ ಉಡುಪಿ ಜಿಲ್ಲೆಯ ಬಗ್ಗೆ ರ್ನಿಲಕ್ಷ$್ಯ ಧೋರಣೆ ಕೈಬಿಟ್ಟು, ತುರ್ತು ಸೇವೆಗಳ ಬಗ್ಗೆ ವಿಶೇಷ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಪ್ರದಿಪ್ ಕುಂದರ್, ಸುಶಾಂತ್ ಪೂಜಾರಿ, ಮಿಥುನ್ ಅಮೀನ್, ಸಚಿನ್ ಪೂಜಾರಿ, ಗಣೇಶ್ ಸೂರಲು, ಭರತ್ ಪೂಜಾರಿ, ಅವಿನಾಶ್, ನಿತಿನ್ ಪೈ , ನಿಖಿಲ್ ಮಡಿವಾಳ್ , ಭೂಷಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.