ಗ್ರಾಪಂ ಮೂಲಕ ಪೆಟ್ರೋಲ್​ ಪಂಪ್​, ಭಾರತ್​ ಕೆಫೆ ಆರಂಭ

ಉಡುಪಿಯ ಜಿಪಂ ಕಚೇರಿಯ ಸಭಾಂಗಣದಲ್ಲಿ ಆಯ್ದ ಗ್ರಾಪಂಗಳ ನಿವೇಶನ ಪಟ್ಟಿಯನ್ನು ಭಾರತ್​ ಪೆಟ್ರೋಲಿಯಂನ ಅಧಿಕಾರಿ ವಿಪಿನ್​ ದಾಸ್​ ವಂಶ್ವಾಲ್​ಗೆ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು. ಪ್ರತಿಕ್​ ಬಾಯಲ್​, ಜೇಮ್ಸ್​ ಡಿಸಿಲ್ವಾ, ಪ್ರಶಾಂತ್​ ಎಂ.ಎನ್​., ವಿಜಯಾ ಇತರರಿದ್ದರು.
ಉಡುಪಿಯ ಜಿಪಂ ಕಚೇರಿಯ ಸಭಾಂಗಣದಲ್ಲಿ ಆಯ್ದ ಗ್ರಾಪಂಗಳ ನಿವೇಶನ ಪಟ್ಟಿಯನ್ನು ಭಾರತ್​ ಪೆಟ್ರೋಲಿಯಂನ ಅಧಿಕಾರಿ ವಿಪಿನ್​ ದಾಸ್​ ವಂಶ್ವಾಲ್​ಗೆ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು. ಪ್ರತಿಕ್​ ಬಾಯಲ್​, ಜೇಮ್ಸ್​ ಡಿಸಿಲ್ವಾ, ಪ್ರಶಾಂತ್​ ಎಂ.ಎನ್​., ವಿಜಯಾ ಇತರರಿದ್ದರು.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

* ಜಿಲ್ಲೆಯ 9 ಗ್ರಾಪಂ ವ್ಯಾಪ್ತಿಯಲ್ಲಿ ಶೀಘ್ರವೇ ಅನುಷ್ಠಾನ

ಉಡುಪಿ: ತೆಲಂಗಾಣದ ನಂತರ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ 9 ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್​ ಪೆಟ್ರೋಲ್​ ಪಂಪ್​, ಇವಿ ಚಾರ್ಜಿಂಗ್​ ಮತ್ತು ಭಾರತ್​ ಕೆಫೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಭಾರತ್​ ಪೆಟ್ರೋಲಿಯಂನ ಅಧಿಕಾರಿಗಳು, ಜಿಪಂ ಸಿಇಒ, ವಿವಿಧ ಗ್ರಾಪಂಗಳ ಅಧಿಕಾರಿಗಳು ಹಾಗೂ ತಹಸೀಲ್ದಾರರೊಂದಿಗೆ ಶುಕ್ರವಾರ (ಜು.17) ಸಭೆ ನಡೆಸಿ ಮಾತನಾಡಿದರು.

ಆರು ತಿಂಗಳಲ್ಲಿ ಆರಂಭ

 ಆಯ್ದ ಗ್ರಾಪಂಗಳಲ್ಲಿ ಹೆದ್ದಾರಿಗೆ ಹೊಂದಿಕೊಂಡು ಇರುವ ಅವರ ನಿವೇಶನಗಳಲ್ಲಿ ಭಾರತ್​ ಪೆಟ್ರೋಲಿಯಂ ಮೂಲಕ ಪಂಪ್​, ಇವಿ ಚಾರ್ಜಿಂಗ್​, ಸಿಎನ್​ಜಿ ಮತ್ತು ಭಾರತ್​ ಕೆಫೆ ನಿರ್ಮಿಸಲಾಗುವುದು. ಆರು ತಿಂಗಳಲ್ಲಿ ಅಂದರೆ ಮುಂದಿನ ವರ್ಷದ ಆರಂಭದಲ್ಲಿ ಈ ಯೋಜನೆ ಕಾರ್ಯಾರಂಭ ಆಗಬೇಕೆನ್ನುವುದು ಕೇಂದ್ರ ಸರ್ಕಾರದ ಗುರಿ ಎಂದರು.

ಇತರ ತಾಲೂಕುಗಳಲ್ಲಿ ಸಮೀಕ್ಷೆ ಕಾರ್ಯ

ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಮುದ್ರಾಡಿ, ಬೆಳ್ವೆ, ಅಲ್ಬಾಡಿ, ಕಾರ್ಕಳದ ಮುಡಾರು, ಬೆಳ್ಮಣ್ಣು, ಸಾಣೂರು, ಕುಕ್ಕಂದೂರು, ಬೈಲೂರು, ಉಡುಪಿಯ ತೆಂಕನಿಡಿಯೂರು ಗ್ರಾಪಂಗಳಲ್ಲಿ ನಿವೇಶನ ಗುರುತಿಸಲಾಗಿದೆ. ಸಂಸ್ಥೆಯ ಮಾನದಂಡದಡಿ ಆಯ್ಕೆ ಮಾಡಿ ಶಿಫಾರಸು ಮಾಡಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಗ್ರಾಪಂ ಪೆಟ್ರೋಲ್​ ಪಂಪ್​ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಭಾರತ್​ ಪೆಟ್ರೋಲಿಯಂನ ಟೆರಿಟರಿ ಮೆನೇಜರ್​ ವಿಪಿನ್​ ದಾಸ್​ ವಂಶ್ವಾಲ್​, ಜಿಪಂ ಸಿಇಒ ಪ್ರತಿಕ್​ ಬಾಯಲ್​, ಜಿಪಂ ಸಹಾಯಕ ಕಾರ್ಯದರ್ಶಿ ಜೇಮ್ಸ್​ ಡಿಸಿಲ್ವಾ, ಕಾರ್ಕಳ ತಾಲೂಕು ಇಒ ಪ್ರಶಾಂತ್​ ಎಂ.ಎನ್​., ಉಡುಪಿ ತಾಲೂಕು ಇಒ ವಿಜಯಾ, ಹೆಬ್ರಿ ತಾಲೂಕು ಡೆಪ್ಯೂಟಿ ತಹಸೀಲ್ದಾರ್​, ಗ್ರಾಪಂ ಪಿಡಿಒಗಳಾದ ದಯಾನಂದ್​ ಬೆನ್ನೂರು, ಪ್ರದೀಪ್​, ನಾಗರಾಜ್​ ಎಂ.ಕೆ., ರಮೇಶ್​, ವಿಶ್ವನಾಥ್​, ಮಮತಾ ವೈ, ಸುಭಾಶ್​, ಸತೀಶ್​ ಉಪಸ್ಥಿತರಿದ್ದರು.

ಆರ್ಥಿಕ, ಆಡಳಿತಾತ್ಮಕ ಶಕ್ತಿ ಹೆಚ್ಚಳ

ಗ್ರಾಪಂಗಳ ಮೂಲಕ ಪೆಟ್ರೋಲ್​ ಪಂಪ್​ಗೆಂದು ನೀಡುವ ನಿವೇಶನಗಳಿಗೆ ಭಾರತ್​ ಪೆಟ್ರೋಲಿಯಂ ಸಂಸ್ಥೆಯು ಬಾಡಿಗೆ ಮತ್ತು ವ್ಯವಹಾರದಲ್ಲಿ ಕಮಿಷನ್​ ನೀಡಲಿದೆ. ಅದರಿಂದ ಗ್ರಾಪಂಗಳಲ್ಲಿ ಆರ್ಥಿಕ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಿಸಲಿದೆ. ಪಂಚಾಯಿತಿಗಳು ನಡೆಸುವ ಪೆಟ್ರೋಲ್​ ಪಂಪ್​ಗಳಲ್ಲಿ ಇವಿ ಚಾರ್ಜಿಂಗ್​ ಜತ ಸಿಎನ್​ಜಿ ವಿತರಣೆಗೂ ಅವಕಾಶವಿದೆ. ಡೀಸೆಲ್​ ಸಹಿತ ಇನ್ನಿತರ ಪೆಟ್ರೋಲಿಯಂ ಉತ್ಪನ್ನ ಮಾರಾಟ ಮಾಡಲೂ ಸಹ ಅನುಕೂಲ ಆಗಲಿದೆ ಎಂದು ಸಂಸದ ಕೋಟ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net