ವೇತನ ಏರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ತಾಪಂ ಕಾರ್ಯನಿರ್ವಹಣಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ನೀಡಿದರು. ಪ್ರಮುಖರಾದ ಸುನೀತಾ, ವಿನೋದಾ, ಮೀನಾಕ್ಷಿ, ಲಲಿತಾ ಕುವೆಟ್ಟು ಮೊದಲಾದವರಿದ್ದರು.
Published on:
Copied
Follow Us
ಬೆಳ್ತಂಗಡಿ: ಅಕ್ಷರ ದಾಸೋಹ ನೌಕರರಿಗೆ 15 ವರ್ಷಗಳಿಂದ ಕೇಂದ್ರ ಸರ್ಕಾರ ಒಂದು ರೂಪಾಯಿ ಸಂಬಳವನ್ನೂ ಏರಿಸದೆ ಮಹಿಳಾ ಕಾರ್ಮಿಕರಿಗೆ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.
ಅಕ್ಷರ ದಾಸೋಹ ನೌಕರರು ಶನಿವಾರ ದೇಶಾದ್ಯಂತ ನಡೆಸುತ್ತಿರುವ ಕರಾಳ ದಿನದ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ನೀಡಿ ಮಾತಾಡಿದರು. ಕನಿಷ್ಠ ನ್ಯಾಯಯುತ ವೇತನ, ಸವಲತ್ತು ಕೊಡಲಾಗದ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ. ರಾಮ ಮಂದಿರದಲ್ಲಿ ಕೋಟ್ಯಂತರ ಹಣ ಲೂಟಿ ಮಾಡುವುದನ್ನು ತಡೆಯಲಾಗದ ಕೇಂದ್ರ ಸರ್ಕಾರಕ್ಕೆ ಬಡವರ ಬದುಕಿನ ಬಗ್ಗೆಯೂ ಚಿಂತೆ ಇಲ್ಲ ಎಂದು ಟೀಕಿಸಿದರು.
ವೇತನ ಹೆಚ್ಚಳ, 12 ತಿಂಗಳ ಸಂಬಳ, ಅರ್ಧದಲ್ಲಿ ಕೆಲಸದಿಂದ ತೆಗೆಯದಂತೆ ತಡೆ, ಕನಿಷ್ಠ 2 ಅಡುಗೆಯವರ ಅಗತ್ಯತೆ ಸೇರಿದಂತೆ 20 ಬೇಡಿಕೆಗಳ ಆಗ್ರಹ ಪತ್ರವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ನೀಡಲಾಯಿತು.
ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಅಧ್ಯಕ್ಷೆ ಸುನೀತಾ, ಕಾರ್ಯದರ್ಶಿ ವಿನೋದಾ, ಖಜಾಂಜಿ ಮೀನಾಕ್ಷಿ, ಮುಖಂಡರಾದ ಲಲಿತಾ ಕುವೆಟ್ಟು, ಸುಂದರಿ ನಿಡ್ಲೆ, ಸಿಐಟಿಯು ಮುಖಂಡರಾದ ಜಯಶ್ರೀ, ಅಶ್ವಿತಾ, ಮಹಿಳಾ ಸಂಘದ ಕಿರಣಪ್ರಭಾ, ಕುಮಾರಿ, ಅಪ್ಪಿ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಅಭಿಷೇಕ್ ಉಪಸ್ಥಿತರಿದ್ದರು.