ಮಳೆಗಾಲದಲ್ಲಿ ನೀರು ತುಂಬಿ ಭರ್ತಿಯಾಗುವ ಮದಗದ ಆಸುಪಾಸಿನ ಮೂರು ಕಿ.ಮೀ.ವರೆಗಿನ ಕೆರೆ, ಬಾವಿಗಳಲ್ಲೂ ಅಂತರ್ಜಲಮಟ್ಟ ಹೆಚ್ಚಲು ಕಾರಣವಾಗುತ್ತಿದೆ. ದಶಕಗಳ ಹಿಂದೆ ಅರೆಮಂಗಿಲ, ಎಣ್ಮಕಜೆ, ನಡುಬೈಲು ಸೇರಿದಂತೆ ವಿವಿಧ ಪ್ರದೇಶಗಳಿಗೆ ಮದಗದಿಂದ ಕಾಲುವೆ ಮೂಲಕ ನೀರು ಹಾಯಿಸಿ ಭತ್ತದ ಕೃಷಿಯನ್ನೂ ನಡೆಸಲಾಗುತ್ತಿತ್ತು. ಜನವರಿ, ಫೆಬ್ರವರಿ ತಿಂಗಳವರೆಗೂ ನೀರು ದಾಸ್ತಾನುಗೊಳ್ಳುತ್ತಿದ್ದ ಬೆದ್ರಂಪಳ್ಳ ಮದಗದ ತಡೆಗೋಡೆ ಶಿಥಿಲಗೊಂಡ ಹಿನ್ನೆಲೆ ನೀರು ದಾಸ್ತಾನೂ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಮದಗದ ಆಸುಪಾಸಿನ ಜಾಗವನ್ನು ಅತಿಕ್ರಮಿಸುವ ಕೆಲಸವೂ ನಡೆಯುತ್ತಿರುವುದಾಗಿ ಆರೋಪ ಕೇಳಿಬರುತ್ತಿದೆ. ಬೆದ್ರಂಪಳ್ಳದ ಆಸುಪಾಸು ಕಲ್ಲಿನ ಕ್ವಾರೆಗಳಿಂದಲೂ ಮದಗಕ್ಕೆ ಭೀತಿ ಎದುರಾಗುತ್ತಿದೆ.