

ಉಡುಪಿ: ವಿದ್ಯಾರ್ಜನೆಯಲ್ಲಿ ತೊಡಗಿರುವ ಮಕ್ಕಳು ತಮ್ಮ ತಂದೆ-ತಾಯಿ ಹಾಗೂ ಶಿಕ್ಷಕರನ್ನು ಸದಾ ಗೌರವ-ಭಕ್ತಿ ಭಾವದಿಂದ ಕಾಣಬೇಕು. ಜೀವನದಲ್ಲಿ ಸಂಸ್ಕಾರ, ಶಿಸ್ತು ಅಳವಡಿಸಿಕೊಂಡು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯ ರೂವಾರಿಗಳಾಗಬೇಕು. ತನ್ಮೂಲಕ ಉತ್ತಮ ಜೀವನ ಸಾಗಿಸಬೇಕು ಎಂದು ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾಜಿ ಪ್ರಧಾನಿ ದಿ. ಜವಾಹರ ಲಾಲ್ ನೆಹರು ಜನ್ಮದಿನದ ನಿಮಿತ್ತ ಶನಿವಾರ (ನ.14) ಆಯೋಜಿಸಿದ್ದ 'ಮಕ್ಕಳ ಹಬ್ಬ' ಉದ್ಘಾಟಿಸಿ ಮಾತನಾಡಿದರು.
ಕಿರಿಯ ವಿದ್ಯಾರ್ಥಿಗಳಾದ ಹೃಷಾಲ್ ಮತ್ತು ಓಜಸ್ವಿ ಗುಪ್ತಾ ಅವರು ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಿದರು. ನೆಹರು ಅವರ ಭಾವಚಿತ್ರಕ್ಕೆ ಎಲ್ಲ ಶಿಕ್ಷಕರೂ ಪುಷ್ಪನಮನ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವಿದ್ಯಾ ಅಮರ ಪೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿರಾಜ ಕುಂದರ್, ಉಪಾಧ್ಯಕ್ಷ ಸಂತೋಷ ಸಗ್ರಿ, ಕೋಶಾಧಿಕಾರಿ ವೈಷ್ಣವಿ ಕಾಮತ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಪ್ರಭು, ವಿದ್ಯಾರ್ಥಿ ನಾಯಕ ಕಿಶನ್ ಎಂ.ಪಿ. ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ವಿನಾಯಕ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜವಾಹರ ಲಾಲ್ ನೆಹರು ಕುರಿತು ವಿದ್ಯಾರ್ಥಿನಿ ನೇಹಾ ಮಾತನಾಡಿದರು. ಶ್ರೀಮಯಿ, ಕೀರ್ತನಾ, ಸಮೀಕ್ಷಾ, ಧೃತಿ ಪಿ.ಎನ್. ಪ್ರಾರ್ಥಿಸಿದರು. ಹಿಮಾಂಶಿ ಸ್ವಾಗತಿಸಿದರು. ಅನ್ವಿ ವಂದಿಸಿದರು. ಶ್ರೇಷ್ಠಾ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.