ಸ್ವಾವಲಂಬಿಗಳಾಗಿ ಸಮಾಜದ ಋಣ ತೀರಿಸಿ

ವಿದ್ಯಾರ್ಥಿಗಳಿಗೆ ಎಂ. ಕೃಷ್ಣ ಹೆಗ್ಡೆ ಕರೆ
ಉಡುಪಿಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಎಂ. ಕೃಷ್ಣ ಹೆಗ್ಡೆ ಉದ್ಘಾಟಿಸಿದರು. ಎಸ್​.ಎಸ್​. ನಾಯಕ್​, ಸುದರ್ಶನ್​ ಆರ್​. ಪೈ, ಚೇಂಪಿ ರಾಮಚಂದ್ರ ಅನಂತ ಭಟ್​, ಗೋಪಾಲಕೃಷ್ಣ ಭಟ್​, ಸುಬ್ರಹ್ಮಣ್ಯ ಪ್ರಭು, ಜಿ.ಸತೀಶ್​ ಹೆಗಡೆ, ಆರ್​. ವಿವೇಕಾನಂದ ಶೆಣೈ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಎಂ. ಕೃಷ್ಣ ಹೆಗ್ಡೆ ಉದ್ಘಾಟಿಸಿದರು. ಎಸ್​.ಎಸ್​. ನಾಯಕ್​, ಸುದರ್ಶನ್​ ಆರ್​. ಪೈ, ಚೇಂಪಿ ರಾಮಚಂದ್ರ ಅನಂತ ಭಟ್​, ಗೋಪಾಲಕೃಷ್ಣ ಭಟ್​, ಸುಬ್ರಹ್ಮಣ್ಯ ಪ್ರಭು, ಜಿ.ಸತೀಶ್​ ಹೆಗಡೆ, ಆರ್​. ವಿವೇಕಾನಂದ ಶೆಣೈ ಇದ್ದರು.
Published on

ಉಡುಪಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ತಂತ್ರಜ್ಞಾನ ಅವಲಂಬಿತರಾಗದೆ ಜೀವನದ ಎಲ್ಲ ಕ್ಷೇತ್ರಗಳ ಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು. ಸಮಾಜದ ಸಹಾಯದಿಂದ ಮುಂದೆ ಸ್ವಾವಲಂಬಿಗಳಾಗಿ ಅಗತ್ಯವಿರುವವರಿಗೆ ಸಹಾಯ ಮಾಡಿ ಸಮಾಜದ ಋಣ ತೀರಿಸಬೇಕು. ದೇಶದ ಬಗ್ಗೆ ಜವಾಬ್ದಾರಿಯನ್ನೂ ಹೊಂದಿರಬೇಕು ಎಂದು ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್​ ಇಂಜಿನಿಯರಿಂಗ್​ ಆ್ಯಂಡ್​ ಮ್ಯಾನೇಜ್ಮೆಂಟ್​ನ ಟ್ರಸ್ಟಿ ಎಂ. ಕೃಷ್ಣ ಹೆಗ್ಡೆ ಕರೆ ನೀಡಿದರು.

ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್​ನ ಆಡಿಟೋರಿಯಂನಲ್ಲಿ ಜಿಎಸ್​ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ ಭಾನುವಾರ (ಸೆ.21) ಆಯೋಜಿಸಿದ್ದ ವಿದ್ಯಾ ಪೋಷಕ ನಿಧಿ 2026-27ನೇ ಸಾಲಿನ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶ ಸೇವೆಯ ಚಿಂತನೆ

ಭಾರತೀಯ ನೌಕಾಪಡೆಯ ಮಾಜಿ ಲೆಫ್ಟಿನೆಂಟ್​ ಕಮಾಂಡರ್​ ಸುದರ್ಶನ್​ ಆರ್​. ಪೈ ಮಾತನಾಡಿ, ವಿದ್ಯಾಭ್ಯಾಸದೊಂದಿಗೆ ದೇಶಸೇವೆಯ ಚಿಂತನೆಯೂ ಅತ್ಯಗತ್ಯ. ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದರೂ ದೇಶದ ಬದ್ಧತೆ ಮತ್ತು ಅಖಂಡತೆ ಕಾಪಾಡುವ ಜವಾಬ್ದಾರಿ ಮರೆಯಕೂಡದು. ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದರು.

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 577 ವಿದ್ಯಾರ್ಥಿಗಳಿಗೆ 68.4 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವು ವಿತರಿಸಲಾಯಿತು. ಆಭರಣ ಜ್ಯುವೆರ್ಲಸ್​ ಪ್ರಾಯೋಜಕತ್ವದಲ್ಲಿ ಅದೃಷ್ಟಶಾಲಿ ವಿದ್ಯಾರ್ಥಿ ಮತ್ತು ಪಾಲಕರನ್ನು ಆಯ್ಕೆ ಮಾಡಿ ಬೆಳ್ಳಿ ನಾಣ್ಯದ ಬಹುಮಾನ ನೀಡಲಾಯಿತು. ಮಾಹೆ ವಿವಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್​ ವಿತರಿಸಲಾಯಿತು.

ಮಂಗಳೂರಿನ ಎಸ್​.ಎಸ್​. ನಾಯಕ್​ ಅಸೋಸಿಯೇಟ್ಸ್​ನ ಸಂಸ್ಥಾಪಕ ಎಸ್​.ಎಸ್​. ನಾಯಕ್​ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅನಂತ ವೈದಿಕ ಕೇಂದ್ರದ ಪ್ರವರ್ತಕ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್​, ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಗೋಪಾಲಕೃಷ್ಣ ಭಟ್​, ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಹಸಂಯೋಜಕ ಸುಬ್ರಹ್ಮಣ್ಯ ಪ್ರಭು ಮಂಗಳೂರು ಉಪಸ್ಥಿತರಿದ್ದರು.

ಜಿಎಸ್​ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಸತೀಶ್​ ಹೆಗಡೆ ಸ್ವಾಗತಿಸಿದರು. ಸಂಚಾಲಕ ಆರ್​. ವಿವೇಕಾನಂದ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾಲೂರು ನರಸಿಂಹ ಕಾಮತ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net