ಸುಧಾರಿಸದ 'ಪ್ರಗತಿ' ನಗರ

ಉಡುಪಿ ತಾಲೂಕಿನ ಪ್ರಗತಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿ.
ಉಡುಪಿ ತಾಲೂಕಿನ ಪ್ರಗತಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿ.
Published on

* ಹದಗೆಟ್ಟಿರುವ ಊರಿನ ಸಂಪರ್ಕ ರಸ್ತೆ

* ಇಕ್ಕೆಲಗಳಲ್ಲಿ ತ್ಯಾಜ್ಯ-ಕಸದ ರಾಶಿ

ಪ್ರಶಾಂತ ಭಾಗ್ವತ ಉಡುಪಿ
ಉಡುಪಿ ತಾಲೂಕಿನಲ್ಲಿರುವ ಈ ಊರಿನ ಹೆಸರು 'ಪ್ರಗತಿ' ನಗರ. ಇಲ್ಲಿಗೆ ಬಂದವರು ಇದೆಂತಹ 'ಪ್ರಗತಿ' ನಗರ ಎಂದು ಮನಸ್ಸಿನಲ್ಲಿ ಬೈದುಕೊಳ್ಳದೆ ಸಂಚರಿಸಲಾರರು. ಇಲ್ಲಿನ ರಸ್ತೆಯೋ ದೇವರಿಗೇ ಪ್ರೀತಿ. ಇಕ್ಕೆಲಗಳಲ್ಲಿ ತ್ಯಾಜ್ಯ&ಕಸದ ರಾಶಿಯೇ ಇದ್ದು, ಸುಂದರ ಪರಿಸರದ ಅಂದವನ್ನೇ ಕೆಡಿಸಿದೆ.
ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರಗತಿ ನಗರವು ವಿವಿಧ ಕೆಲಸ ಕಾರ್ಯಗಳಿಗಾಗಿ ಹೆಚ್ಚು ಜನಸಂಚಾರವಿರುವ ಪ್ರಮುಖ ಊರು. ಆದರೆ, ಇಲ್ಲಿನ ಅವ್ಯವಸ್ಥೆ ಕಂಡಾಗ ಪ್ರಗತಿ ಕಾಣದ, ಸುಧಾರಿಸದ ನಗರದಂತೆ ಗೋಚರಿಸುತ್ತಿದೆ.

ಹೊಂಡಮಯ ರಸ್ತೆ

ಮಣಿಪಾಲದಿಂದ ಕೈಗಾರಿಕಾ ಪ್ರದೇಶ ರಸ್ತೆಯ ಎಡ ತಿರುವಿನಲ್ಲಿ ಮುಂದೆ ಒಂದು ಕಿಮೀ ಸಾಗಿದರೆ ಮತ್ತೆ ಎಡ ತಿರುವಿನಲ್ಲಿ ಪ್ರಗತಿ ನಗರ ಸಂಪರ್ಕಿಸುವ ರಸ್ತೆಯಿದೆ. ಆರಂಭದಲ್ಲಿ ಈ ಮಾರ್ಗ ರಾಜೀವ ನಗರ ಸಂಪರ್ಕಿಸುವ 80 ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ರಸ್ತೆಯಾಗಿದ್ದು ಸಂಪೂರ್ಣ ಹದಗೆಟ್ಟಿದೆ. ಮುಂದೆ ಅಲೆವೂರು ಗ್ರಾಪಂನ ಪ್ರಗತಿ ನಗರದವರೆಗೂ ರಸ್ತೆ ಹೊಂಡಮಯವಾಗಿದೆ.

ಚಾಲಕರ ಪರದಾಟ

ಮಳೆಯ ಕಾರಣದಿಂದಲೋ ಅಥವಾ ರಸ್ತೆ ಮಾಡುವಾಗಲೇ ಸರಿಯಾದ ಕಾಮಗಾರಿ ಕೈಗೊಳ್ಳದ್ದರಿಂದಲೋ ಇಲ್ಲಿನ ರಸ್ತೆಯಲ್ಲಿ ವಾಹನ ಚಲಾಯಿಸಲು ತೊಡಕಾಗುತ್ತಿದೆ. ನೆಲದ ಮಟ್ಟದಿಂದ ಎರಡೂ ಕಡೆಗಳಲ್ಲಿ ರಸ್ತೆ ಎತ್ತರದಲ್ಲಿದ್ದು, ಮುಖಾಮುಖಿಯಾಗಿ 4 ಚಕ್ರದ ವಾಹನಗಳು ಬಂದಾಗ ಚಾಲಕರು ಪರದಾಡುತ್ತಾರೆ. ಕಾರು, ಅಟೋ ಚಾಲಕರು ಹಾಗೂ ಬೈಕ್​ ಸವಾರರಿಗೆ ಎದುರಿನಿಂದ ಬಸ್​ ಅಥವಾ ಲಾರಿ ಬಂದರೆ ಎದೆ ಢವಢವ ಎನ್ನುತ್ತದೆ. ಚಲಿಸುತ್ತಿರುವ ವೇಗದಲ್ಲೇ ರಸ್ತೆಯಿಂದ ಟೈರ್​ ಕೆಳಗೆ ಇಳಿಸಲು ಆಗದಷ್ಟು ರಸ್ತೆ ಎತ್ತರವಾಗಿದೆ. ಅನೇಕ ಬೈಕ್​ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಕಸದ ರಾಶಿ

ಪ್ರಗತಿ ನಗರದಿಂದ ಮುಂದೆ ಅಲೆವೂರಿನಲ್ಲಿ ಉಡುಪಿ ನಗರದ ಕಸ ಸಂಗ್ರಹಿಸುವ ನಗರಸಭೆಯ ಡಂಪಿಂಗ್​ ಯಾರ್ಡ್​ ಇದೆ. 'ದೀಪದ ಬುಡ ಕತ್ತಲು' ಎನ್ನುವಂತೆ ಪ್ರಗತಿ ನಗರದ ಸಮೀಪದಲ್ಲಿಯೇ ಕಸ ಸಂಗ್ರಹಣಾಗಾರ ಇದ್ದರೂ ಸಹ ಊರಿನ ರಸ್ತೆಯ ಎರಡೂ ಕಡೆಗಳಲ್ಲಿ ಕಸದ ರಾಶಿಯೇ ಹರಡಿಕೊಂಡಿದ್ದು, ಪರಿಸರದ ಸ್ವಾಸ್ಥ್ಯ ಹಾಳಾಗಿದೆ.  

ಸರ್ಕಾರಿ ಇಲಾಖೆ, ತರಬೇತಿ ಕೇಂದ್ರವಿರುವ ಊರು 

ಪ್ರಗತಿ ನಗರವು ಕೇವಲ ಜನವಸತಿಯಷ್ಟೇ ಇರುವ ಸಾಮಾನ್ಯ ಊರಲ್ಲ. ಇದು ಪ್ರತಿಷ್ಠಿತ ಗ್ರಾಮವಾಗಿದ್ದು, ಇಲ್ಲಿ ಕೇಂದ್ರೀಯ ವಿದ್ಯಾಲಯವಿದೆ. ಡಾ. ವಿ.ಎಸ್​. ಆಚಾರ್ಯ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ತರಬೇತಿ ಮತ್ತು ಶಿಬಿರ ಕೇಂದ್ರವಿದೆ. ಅಲ್ಲದೆ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಚೇರಿಯೂ ಇದೆ. ಹೀಗಾಗಿ ನಿತ್ಯ ಈ ಮಾರ್ಗದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಕೆಲಸದ ನಿಮಿತ್ತ ಹಲವು ಜನರು ಸಂಚರಿಸುವ ಪ್ರಮುಖ ಮಾರ್ಗ ಅವ್ಯವಸ್ಥೆಯಿಂದ ಕೂಡಿದೆ ಎನ್ನುತ್ತಾರೆ ಸ್ಥಳೀಯರು.
"

ಉಡುಪಿ ನಗರದಿಂದ ಕಸಗಳನ್ನು ತರುವ ಹಲವು ವಾಹನಗಳು ಪ್ರಗತಿ ನಗರ ರಸ್ತೆ ಮಾರ್ಗವಾಗಿಯೇ ಅಲೆವೂರು ಡಂಪಿಂಗ್​ ಯಾರ್ಡ್​ಗೆ ಸಂಚರಿಸುತ್ತಿದ್ದು ಅವುಗಳಿಂದ ಕಸ ಬೀಳುತ್ತದೆ ಎನ್ನಲಾಗಿದೆ. ಸ್ಥಳೀಯವಾಗಿಯೂ ಕೆಲವರು ತಮ್ಮ ಮನೆಯ ಕಸವನ್ನು ರಸ್ತೆಗೆ ಎಸೆಯುವುದು ಕಂಡುಬರುತ್ತಿದೆ. ಪರಿಸರದ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net