ಬಂಟ್ವಾಳ: ಕೃಷಿಕರನ್ನು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸಿ, ಮಾರ್ಗದರ್ಶನ ಮಾಡಬೇಕಾದ ತಾಲೂಕಿನ ಕೃಷಿ ಇಲಾಖೆಯ ಕಚೇರಿ ಸಿಬ್ಬಂದಿ ಕೊರತೆಯಿಂದ ಬರಡಾಗಿದೆ! ಇಲ್ಲಿ 18 ಹುದ್ದೆಗಳು ಮಂಜೂರಾಗಿವೆ. ಆದರೆ ಕಾರ್ಯನಿರ್ವಹಿಸುವುದು ಒಬ್ಬರು ಮಾತ್ರ. ಉಳಿದ 17 ಹುದ್ದೆಗಳು ಖಾಲಿ.
ದ.ಕ. ಜಿಲ್ಲೆಯ ಪೈಕಿ ಬಂಟ್ವಾಳ ಅತಿದೊಡ್ಡ ಕಂದಾಯ ತಾಲೂಕಾಗಿದೆ. ಬಂಟ್ವಾಳ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 57 ಗ್ರಾಮ ಪಂಚಾಯಿತಿಗಳಿದ್ದು 71 ಗ್ರಾಮಗಳಿವೆ. ಹೋಬಳಿಗೆ ಒಂದರಂತೆ ರೈತ ಸಂಪರ್ಕ ಕೇಂದ್ರಗಳಿವೆ. ಬಿ.ಸಿ.ರೋಡ್‌ನಲ್ಲಿ ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ತಾಂತ್ರಿಕ ಕೃಷಿ ಅಧಿಕಾರಿ ಇಬ್ಬರ ಪೈಕಿ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಮತ್ತೊಂದು ಖಾಲಿ ಹಾಗೂ ಕೃಷಿ ಅಧಿಕಾರಿಯೂ ಬಂಟ್ವಾಳಕ್ಕೆ ಇಲ್ಲ.
ರೈತ ಸಂಪರ್ಕ ಕೇಂದ್ರಕ್ಕೆ ಯಾರೂ ಇಲ್ಲ!
ಬಂಟ್ವಾಳಕ್ಕೆ ಸಂಬಂಧಿಸಿ ಮೂರು ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಹುದ್ದೆಯೂ ಭರ್ತಿಯಾಗಿಲ್ಲ. ಬಂಟ್ವಾಳ, ಪಾಣೆಮಂಗಳೂರು ಹಾಗೂ ವಿಟ್ಲ ರೈತ ಸಂಪರ್ಕ ಕೇಂದ್ರದಲ್ಲಿ ತಲಾ ಒಬ್ಬೊಬ್ಬ ಕೃಷಿ ಅಧಿಕಾರಿ ಹಾಗೂ ತಲಾ ನಾಲ್ವರು ಸಹಾಯಕ ಕೃಷಿ ಅಧಿಕಾರಿ ಬೇಕು. ಆದರೆ, ಯಾವ ಕೇಂದ್ರದಲ್ಲಿ ಸಿಬ್ಬಂದಿಯಿಲ್ಲ.
ಬಂಟ್ವಾಳ ತಾಲೂಕಿನ ಕೃಷಿ ಇಲಾಖೆ ಮುಖ್ಯಸ್ಥರಾದ ಸಹಾಯಕ ಕೃಷಿ ನಿರ್ದೇಶಕರ ಹುದ್ದೆ 2023ರಿಂದ ಭರ್ತಿಯಾಗದೆ ಖಾಲಿ ಇದೆ. ಮೂರೂವರೆ ವರ್ಷಗಳಿಂದ ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರೇ ಇಲ್ಲಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಳೆಗಾಲ ಆರಂಭವಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರುವ ಕಾಲ. ಭತ್ತದ ಬೇಸಾಯ ಮಾಡುವವರು ಈ ವೇಳೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಯೋಜನೆಗಳ ಅನುಕೂಲ ಪಡೆಯುವ ಸಮಯ. ಆದರೆ ಇಲಾಖೆಯಲ್ಲಿ ಹುದ್ದೆಗಳೇ ಭರ್ತಿಯಾಗದೆ ಇದ್ದರೆ ಕೃಷಿಕರಿಗೆ ಇಲಾಖೆ ಏನು ನೀಡಲು ಸಾಧ್ಯ? ಎನ್ನುವ ಪ್ರಶ್ನೆಗಳು ಜನರಿಂದ ಕೇಳಿ ಬರುತ್ತಿದೆ.
ಬಳಕೆಗಿಲ್ಲದ ಸಿದ್ದಕಟ್ಟೆಯ ಗೋದಾಮು
ಸಿದ್ದಕಟ್ಟೆಯಲ್ಲಿ ಕೃಷಿ ಇಲಾಖೆಯ ಬಂಟ್ವಾಳ ಹೋಬಳಿಯ ರೈತ ಸಂಪರ್ಕ ಕೇಂದ್ರದ ಗೋದಾಮು ಆಗಿಯೂ ಬಳಕೆಗೆ ಸಿಗದೆ ಬಾಕಿಯಾಗಿದೆ. ಕಟ್ಟಡದ ಕಾಮಗಾರಿ ಈಗಾಗಲೇ ಮುಗಿದಿದೆ. ಆದರೆ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಬಾಕಿ ಇದೆ. ಆದರೂ ಗೋದಾಮು ಕಟ್ಟಡ ಕೃಷಿಕರ ಅನುಕೂಲಕ್ಕಾಗಿ ಆರಂಭ ಮಾಡುವ ಅಗತ್ಯತೆ ಇದೆ. ಕೃಷಿ ಪರಿಕರಗಳನ್ನು ದಾಸ್ತಾನು ಮಾಡಿ ವಿತರಣೆ ಮಾಡುವ ಕಾರ್ಯ ಈ ಮೂಲಕ ನಡೆಸಲು ಅವಕಾಶ ಇದೆ. ಈ ಬಗ್ಗೆ ಇಲಾಖೆ ಸಂಬಂಧಪಟ್ಟವರು ಆದ್ಯತೆ ನೀಡಬೇಕಾಗಿದೆ.