ಬಪ್ಪನಾಡು ವಾರ್ಷಿಕ ಮಹಾ ರಥೋತ್ಸವ

 ಸಾಂಕೇತಿಕವಾಗಿ ಬ್ರಹ್ಮರಥವನ್ನು ಸ್ವಲ್ಪ ಎಳೆದು ಬಳಿಕ ವಿಮಾನ ರಥದಲ್ಲಿ ರಥೋತ್ಸವ ನಡೆಸಲಾಯಿತು.
ಸಾಂಕೇತಿಕವಾಗಿ ಬ್ರಹ್ಮರಥವನ್ನು ಸ್ವಲ್ಪ ಎಳೆದು ಬಳಿಕ ವಿಮಾನ ರಥದಲ್ಲಿ ರಥೋತ್ಸವ ನಡೆಸಲಾಯಿತು.
Published on
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಲಕ್ಷಾಂತರ ಭಕ್ತರ ಗೋವಿಂದ ನಾಮಸ್ಮರಣೆಯೊಂದಿಗೆ ಗುರುವಾರ ಮುಂಜಾನೆ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು.
ಕಳೆದ ವರ್ಷ ನಡೆದ ಬ್ರಹ್ಮರಥದ ಅವಘಡದ ಬಳಿಕ ತಾತ್ಕಾಲಿಕವಾಗಿ ರಥವನ್ನು ರಿಪೇರಿ ಮಾಡಲಾಗಿದ್ದು, ದರ್ಶನ ಬಲಿ ಬಳಿಕ ರಥಾರೂಢರಾದ ದೇವರಿಗೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ರಥವನ್ನು ಸ್ವಲ್ಪ ಎಳೆದು ಬಳಿಕ ವಿಮಾನ ರಥದಲ್ಲಿ ರಥೋತ್ಸವ ನಡೆಸಲಾಯಿತು. ಈ ಬಾರಿ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿ ಇಡೀ ಕ್ಷೇತ್ರ ಭಕ್ತ ಜನರಿಂದ ತುಂಬಿ ತುಳುಕುತ್ತಿತ್ತು.'
ಪ್ರತಿ ವರ್ಷದಂತೆ ರಾತ್ರಿ ಬಲಿ ಹೊರಟು ಓಕುಳಿ, ವಾದ್ಯಗೋಷ್ಠಿ, ಯಕ್ಷಗಾನ, ಚೆಂಡೆ ಸುತ್ತು ಪೂರೈಸಿ ಸ್ವರ್ಣ ಪಲ್ಲಕಿಯಲ್ಲಿ ದೇವರನ್ನು ವಿರಾಜಮಾನಗೊಳಿಸಿ ಪೇಟೆ ಸವಾರಿಗಾಗಿ ಮೂಲ್ಕಿಗೆ ಆಗಮಿಸಿ ಕೊಪ್ಪಲ ಮಠದಲ್ಲಿ ವಿಶ್ರಾಂತಿ ಬಳಿಕ ನೇರವಾಗಿ ರಥೋತ್ಸವ ಗದ್ದೆಗೆ ಆಗಮನ, ಸಸಿಹಿತ್ಲು ಭಗವತಿ ದೇವಿ ಹಾಗೂ ಪರಿವಾರ ಶಕ್ತಿಗಳ ಆಗಮನ, ಮೂಲ್ಕಿ ಸೀಮೆ ಅರಸರು, ಅವರ ನಾಯಕರು, ವಿವಿಧ ಕ್ಷೇತ್ರಗಳ ಮೊಕ್ತೇಸರರು ಆಗಮಿಸಿದ ಬಳಿಕ ರಥೋತ್ಸವ ದರ್ಶನ ಬಲಿ, ದೇವರು ರಥಾರೂಢರಾದ ಬಳಿಕ ಪೂಜೆ, ರಥೋತ್ಸವ, ಸುಡುಮದ್ದು ಪ್ರದರ್ಶನ, ಅವಭೃತ ಸ್ನಾನ, ಸೂಟೆದಾರ, ಕೊನೆಯ ಬೆಡಿಕಂಬ, ಜಲಕದ ಬಲಿ, ವಿಶ್ರಾಂತಿ ಪೂಜೆ, ಧ್ವಜಾವರೋಹಣ, ಶ್ರೀದೇವಿ, ಶ್ರೀಭಗವತಿ ಭೇಟಿಯಾದ ಸಂದರ್ಭ ಭಗವತಿ ತನ್ನ ಕ್ಷೇತ್ರದ ನಡಾವಳಿಗಾಗಿ ಶ್ರೀದೇವಿಯನ್ನು ಆಮಂತ್ರಿಸಿ ತೆರಳುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು. ಗುರುವಾರ ಕ್ಷೇತ್ರದಲ್ಲಿ ಊರಪರವೂರ ಭಕ್ತರಿಂದ ಹಣ್ಣು ಕಾಯಿ ಸಮರ್ಪಣೆ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net