ಕುಂದಾಪುರ: ಸೇನಾಪುರ ಗ್ರಾಮದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬಂಟ್ವಾಡಿ ಸೇತುವೆಯಲ್ಲಿದ್ದ ದೊಡ್ಡ ದೊಡ್ಡ ಹೊಂಡಗಳಿಗೆ ತೇಪೆ ಹಾಕಿ ದುರಸ್ತಿ ಕಾರ್ಯ ನಡೆಸಲಾಗಿದೆ.
ಸೇತುವೆ ಸಂಧಿಗಳಲ್ಲಿ ಸಿಮೆಂಟ್ ಕಿತ್ತು ಹೋಗಿರುವ ಸ್ಥಳಗಳನ್ನು ದುರಸ್ತಿ ಮಾಡಿ ತೇಪೆ ಹಾಕಲಾಗಿದ್ದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಬಂಟ್ವಾಡಿ ಸೇತುವೆಯು ಆಲೂರು, ಹಕ್ಲಾಡಿ, ಸೇನಾಪುರ, ಪಡುಕೋಣೆ, ಬಡಾಕೆರೆ, ನಾಡಗುಡ್ಡೆಯಂಗಡಿ ಮೊದಲಾದ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಸೇತುವೆ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದವು. ಸೇತುವೆಯ ಮೂಲೆಯಲ್ಲಿ ಸಿಮೆಂಟ್ ಕಿತ್ತು ಹೋಗಿ ಕಬ್ಬಿಣ ರಾಡ್ ಮೇಲೆ ಕಾಣಿಸುತ್ತಿದ್ದವು. ಇದರಿಂದಾಗಿ ಬೈಕ್ ಮತ್ತಿತರ ಲು ವಾಹನಗಳು ಸೇತುವೆ ಮೇಲೆ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದೀಗ ತೇಪೆ ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಈ ಬಗ್ಗೆ ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖೆ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.
ನಲ್ವತ್ತು ವರ್ಷ ಪುರಾತನವಾದ ಬಂಟ್ವಾಡಿ ಸೇತುವೆ ನಿರ್ವಹಣೆ ಇಲ್ಲದೆ ದೊಡ್ಡ ಹೊಂಡಗಳು ಉಂಟಾಗಿದ್ದವು. ಈಗ ತೇಪೆ ಹಾಕಿ ಮುಚ್ಚಿ ದುರಸ್ತಿಪಡಿಸಲಾಗಿದೆ. ದ್ವಿಚಕ್ರ ವಾಹನ ಹಾಗೂ ಲು ವಾಹನ ಸವಾರರು ನೆಮ್ಮದಿಯಿಂದ ಸೇತುವೆ ಮೇಲೆ ಸಂಚರಿಸುವಂತಾಗಿದೆ.