ಫರಂಗಿಪೇಟೆಯಲ್ಲಿ ಬ್ಯಾಂಕ್‌ನಲ್ಲಿ ಕಳವು ಯತ್ನ

ಕಳವು ಕೃತ್ಯ ನಡೆದಿರುವ ಫರಂಗಿಪೇಟೆಯ ಕೆನರಾ ಬ್ಯಾಂಕ್ ಶಾಖೆ.
ಕಳವು ಕೃತ್ಯ ನಡೆದಿರುವ ಫರಂಗಿಪೇಟೆಯ ಕೆನರಾ ಬ್ಯಾಂಕ್ ಶಾಖೆ.
Published on
ಬಂಟ್ವಾಳ: ಫರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಯಾವುದೇ ಬೆಲೆಬಾಳುವ ವಸ್ತುಗಳು ಕಳವಾಗಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಫರಂಗಿಪೇಟೆಯ ಮಿನೇಜಸ್ ಫ್ಲಾಜಾ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ಗೆ ರಾತ್ರಿ ಒಳನುಗ್ಗಿದ ಕಳ್ಳರು ಬ್ಯಾಂಕ್‌ನ ಲಾಕರ್ ತೆರೆಯಲು ಸಾಧ್ಯವಾಗದೆ ಬರಿಗೈಯಲ್ಲಿ ವಾಪಸ್ ಹೋಗಿದ್ದಾರೆ.
ಸೋಮವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಮೇಲ್ಛಾವಣಿಯನ್ನು ತುಂಡರಿಸಿ ಕಳ್ಳರು ಒಳಪ್ರವೇಶಿಸಿದ್ದಾರೆ. ಬ್ಯಾಂಕಿನ ಅಲರಾಂ ಶಬ್ದ ಮಾಡಿರಲಿಲ್ಲ.
ಕಟ್ಟಡದ ಮೊದಲ ಮಹಡಿಯಲ್ಲಿ ಖಾಲಿ ಕೋಣೆಗಳಿವೆ. ಈ ಪೈಕಿ ಒಂದು ಕೋಣೆಯ ಶಟರ್ ತೆರೆದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಬ್ಯಾಂಕ್‌ನ ಮೇಲ್ಛಾವಣಿ ಗೋಡೆಯನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸಿ ಒಳನುಗ್ಗಿದ ಕಳ್ಳರು ಲಾಕರ್ ತುಂಡರಿಸಲು ಯತ್ನಿಸಿದ್ದಾರೆ. ಆದರೆ ಲಾಕರ್ ಗಟ್ಟಿ ಇದ್ದ ಕಾರಣ ತುಂಡಾಗಲಿಲ್ಲ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಗಾಬರಿಯಿಂದ ಬ್ಯಾಂಕ್‌ಗೆ ಆಗಮಿಸಿ ಲಾಕರ್‌ನಲ್ಲಿದ್ದ ಚಿನ್ನಾಭರಣದ ಬಗ್ಗೆ ವಿಚಾರಿಸಿದರು.
ಎಸ್‌ಪಿ ಡಾ.ಅರುಣ್ ಕುಮಾರ್, ಬಂಟ್ವಾಳ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಬಂಟ್ವಾಳ ಗ್ರಾಮಾಂತರ ಠಾಣೆ ಎಸ್‌ಐ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್ ಮುಂಭಾಗದ ಸಿಸಿ ಕ್ಯಾಮರಾ, ಅಕ್ಕಪಕ್ಕದ ಕಟ್ಟಡದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದರು. ಬೆರಳಚ್ಚು ತಂಡ, ಸೋಕೋ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net