ಮುಸ್ಲಿಮರಿಂದ 'ಈದುಲ್​ ಅಝಾ' ಆಚರಣೆ

ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯಲ್ಲಿ ಇಮಾಮ್​ ಮೌಲಾನಾ ಒಬೈದುರ್​ ರಹ್ಮಾನ್​ ನದ್ವಿ ಈದ್​ ಸಂದೇಶ ನೀಡಿದರು.
ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯಲ್ಲಿ ಇಮಾಮ್​ ಮೌಲಾನಾ ಒಬೈದುರ್​ ರಹ್ಮಾನ್​ ನದ್ವಿ ಈದ್​ ಸಂದೇಶ ನೀಡಿದರು.
Published on

* ಉಡುಪಿ ಜಿಲ್ಲಾದ್ಯಂತ ಸಮುದಾಯದವರಿಂದ ಪ್ರಾರ್ಥನೆ

* ಎಲ್ಲ ತಾಲೂಕುಗಳ ಮಸೀದಿಗಳಲ್ಲಿ ಶುಭಾಶಯ ವಿನಿಮಯ

ಉಡುಪಿ: ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬಕ್ರೀದ್​ ಹಬ್ಬ (ಈದುಲ್​ ಅಝಾ)ವನ್ನು ಸಂಭ್ರಮ, ಸಡಗರದಿಂದ ಗುರುವಾರ (ಮೇ 28) ಆಚರಿಸಿದರು.
ಉಡುಪಿ ನಗರ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್​ ನಮಾಝ್​ ನೆರವೇರಿಸಲಾಯಿತು.
ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿ, ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್​ ನಮಾಝ್​ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್​ ಬಳಿಕ ಎಲ್ಲರೂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿಯ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರಶೀದ್​ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್​ ಮಸೀದಿಯಲ್ಲಿ ಮೌಲಾನಾ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್​ ನಮಾಝ್​ ನಡೆಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತ್​ನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್​ ಹಾಫಿಲ್​ ಮುಹಮ್ಮದ್​ ಅಶ್ರಫ್​ ಸಖಾಫಿ ನೇತೃತ್ವದಲ್ಲಿ ಈದ್​ ವಿಶೇಷ ನಮಾಝ್​ ಮತ್ತು ಖುತ್ಬಾ ಪಾರಾಯಣ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್​ ಈದ್​ ನಮಾಝ್​ನಲ್ಲಿ ಪಾಲ್ಗೊಂಡರು.
ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್​ ಮೆರವಣಿಗೆ ಹೊರಟು ಕುಂದಾಪುರ ಈದ್ಗಾ ಮೈದಾನದಲ್ಲಿ ನಮಾಝ್​ ನಡೆಯಿತು. ಉಡುಪಿ ಬ್ರಹ್ಮಗಿರಿಯ ನಾಯರ್​ಕೆರೆಯ ಸಮೀಪದ ಹಾಶಿಮಿ ಮಸೀದಿಯ ಇಮಾಮ್​ ಒಬೈದುರ್​ ರಹ್ಮಾನ್​ ನದ್ವಿ ನೇತೃತ್ವದಲ್ಲಿ ಈದ್​ ವಿಶೇಷ ನಮಾಝ್​ ನಿರ್ವಹಿಸಲಾಯಿತು.
ಈದ್​ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾದ್ಯಂತ ಬಹುತೇಕ ಮಸೀದಿಗಳಿಗೆ ಪೊಲೀಸ್​ ಬಂದೋಬಸ್ತ್​ ಒದಗಿಸಲಾಗಿತ್ತು.
ಉಡುಪಿ ದೊಡ್ಡಣಗುಡ್ಡೆಯ ರಹ್ಮಾನಿಯ ಜುಮ್ಮಾ ಮಸೀದಿಯ ಖತೀಬರಾದ ಖಾಸಿಂ ಉಸ್ತಾದ್​ ಬಕ್ರೀದ್​ ಸಂದೇಶ ನೀಡಿದರು.
ಸೌಹಾರ್ದದ ಸಂಕೇತವಾಗಿರಲಿ ಹಬ್ಬ
ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯಲ್ಲಿ ಇಮಾಮ್​ ಮೌಲಾನಾ ಒಬೈದುರ್​ ರಹ್ಮಾನ್​ ನದ್ವಿ ಅವರು ಈದ್​ ಸಂದೇಶದಲ್ಲಿ, ಹಬ್ಬವು ಶಾಂತಿ, ಸೌಹಾರ್ದದ ಸಂಕೇತವಾಗಿರಬೇಕು. ತನ್ಮೂಲಕ ಮುಸ್ಲಿಮರು ಮಾದರಿಯಾಗಿ ಹಬ್ಬ ಆಚರಿಸಬೇಕು. ಹೆಲ್ಮೆಟ್​, ಲೈಸನ್ಸ್​ ಇಲ್ಲದೆ ಅತಿವೇಗವಾಗಿ ಬೈಕ್​ ಹಾಗೂ ಕಾರು ಚಲಾಯಿಸಬಾರದು. ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಬೇಕು. ಮಾದಕ ದ್ರವ್ಯ ಸೇವಿಸುವ ಘಟನೆ ಹೆಚ್ಚುತ್ತಿದ್ದು, ಮಕ್ಕಳ ಮೇಲೆ ಪಾಲಕರು ವಿಶೇಷ ಗಮನವಿಟ್ಟು ನಿಗಾ ವಹಿಸಬೇಕು ಎಂದರು. ಮಸೀದಿಯ ಅಧ್ಯಕ್ಷ ಜಕ್ರಿಯ ಅಸ್ಸದಿ, ಸಾಮಾಜಿಕ ಕಾರ್ಯಕರ್ತ ಹಾಗೂ ಮಸೀದಿಯ ಕಾರ್ಯದರ್ಶಿ ಎಂ. ಇಕ್ಬಾಲ್​ ಮನ್ನಾ ಎಲ್ಲರಿಗೂ ಈದ್​ ಶುಭಾಶಯ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net