ಬಡಗಬೆಟ್ಟು ಸೊಸೈಟಿಗೆ 18.13 ಕೋಟಿ ರೂ. ಲಾಭ

ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿ.
ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿ.
Published on
ಉಡುಪಿ: ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸ್ಯಾಟಿ 2025-26ನೇ ಸಾಲಿನಲ್ಲಿ 4062.29 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, 18.13 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ 108 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಂಘವು, 22,869 ಸದಸ್ಯರನ್ನು ಹೊಂದಿದ್ದು, 658.80 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 14.93ರಷ್ಟು ಏರಿಕೆಯಾಗಿದೆ. ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ 533.96 ಕೋಟಿ ರೂ. ಆಗಿದ್ದು, ಇದು ಕಳೆದ ಸಾಲಿಗಿಂತ ಶೇ. 11.94 ಏರಿಕೆಯಾಗಿದೆ. ಸಂವು ಒಟ್ಟು ರೂ. 791.46 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಮುಂದಿನ ವರ್ಷದಲ್ಲಿ 750 ಕೋಟಿ ರೂ. ಠೇವಣೆ ಹಾಗೂ 650 ಕೋಟಿ ರೂ. ಸಾಲ ವಿತರಣೆ ಸೇರಿದಂತೆ ಒಟ್ಟು 1400 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದರು.
ಕುಂದಾಪುರದಲ್ಲಿ 12ನೇ ಶಾಖೆ ಶೀಘ್ರ ಆರಂಭ
ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಶಾಖೆಗಳು ಸಂಘದ ಸ್ವಂತ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಘದ 12ನೇ ಶಾಖೆ ಕುಂದಾಪುರದಲ್ಲಿ ಪ್ರಾರಂಭವಾಗಲಿದೆ. ನಗರದ ಹೃದಯಭಾಗದಲ್ಲಿ ಸ್ವಂತ ಕಚೇರಿ ಖರೀದಿಸಲಾಗಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಉಡುಪಿಯಲ್ಲಿ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ ಸಹಕಾರ ಸೌಧ ನಿಮಾರ್ಣದ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಶಸ್ತಿಗಳು ಮತ್ತು ಸಾಮಾಜಿಕ ಸೇವೆ
ಸಂಘವು 2 ಬಾರಿ ರಾಷ್ಟ್ರಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 19 ಬಾರಿ ಆವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವಿ ಕ್ರೆಡಿಟ್​ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ 'ಸಹಕಾರ ಮಾಣಿಕ್ಯ' ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಹೊಣೆಗಾರಿಕೆಯಡಿ ಪ್ರತಿ ವರ್ಷ ಸುಮಾರು 25 ಲಕ್ಷ ರೂ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ ಎಂದರು.
ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್​., ಪದ್ಮನಾಭ ನಾಯಕ್​, ಹಾಜಿ ಸೈಯದ್​ ಅಬ್ದುಲ್​ ರಜಾಕ್​, ಸದಾಶಿವ ನಾಯ್ಕ, ಸಾಧು ಸಾಲ್ಯಾನ್​, ಜಯಾ ಶೆಟ್ಟಿ, ಗಾಯತ್ರಿ ಎಸ್​. ಭಟ್​, ಪ್ರಧಾನ ವ್ಯವಸ್ಥಾಪಕ ರಾಜೇಶ್​ ವಿ. ಶೇರಿಗಾರ್​, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣ್​ ಕುಮಾರ್​, ಲೆಕ್ಕಾಧಿಕಾರಿ ಅಶ್ವಿನಿ ಕುಮಾರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net