ಆಯುಷ್ಮಾನ್ ಕೇಂದ್ರ ಉದ್ಘಾಟನೆಗೆ ಸಜ್ಜು

ಉದ್ಘಾಟನೆಗೆ ಸಜ್ಜಾಗಿ ನಿಂತಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ.
ಉದ್ಘಾಟನೆಗೆ ಸಜ್ಜಾಗಿ ನಿಂತಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ನಾಲ್ಕು ಸುಸಜ್ಜಿತ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿವೆ.
ಬೈಂದೂರು ತಾಲೂಕಿನ ಹೇರೂರು ಹಾಗೂ ನಾಡ ಮತ್ತು ಕುಂದಾಪುರ ತಾಲೂಕಿನ ಬಸ್ರೂರು ಹಾಗೂ ಬಿದ್ಕಲ್‌ಕಟ್ಟೆ ಭಾಗದಲ್ಲಿ ನೂತನ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡಗಳನ್ನು ಈಗಾಗಲೇ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ವೈದ್ಯಕೀಯ ಸೇವೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ಮನೆ ಸಮೀಪದಲ್ಲೇ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವುದು ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಪ್ರಮುಖ ಉದ್ದೇಶ. ರೋಗಗಳ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ರೋಗ ಪತ್ತೆ, ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ, ಆರೋಗ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸಲಿದ್ದು, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ನಾಲ್ಕೂ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮದ ದಿನಾಂಕ ಶೀಘ್ರ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಹೊಸಂಗಡಿ ಹಾಗೂ ಸೇನಾಪುರ ಭಾಗ ಸೇರಿದಂತೆ ಇನ್ನೂ ನಾಲ್ಕು ಕಡೆ ನೂತನ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯರಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಆಯುಷ್ಮಾನ್ ಕೇಂದ್ರ?

ಇದು ಅಲೋಪಥಿ ಚಿಕಿತ್ಸೆ ಸೇರಿದಂತೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಕೇಂದ್ರ. ಇದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೌಲ್ಯವರ್ಧಿತ ರೂಪ. ಅದನ್ನೇ ಮೇಲ್ದರ್ಜೆಗೇರಿಸಿ ರೂಪಿಸಿದ ವ್ಯವಸ್ಥೆ. ಪ್ರಾಥಮಿಕ ಆರೋಗ್ಯದಲ್ಲಿ ರೋಗ ಬಂದಾಗ ಚಿಕಿತ್ಸೆ ನೀಡುವ ವ್ಯವಸ್ಥೆ ಇತ್ತು. ಅಲ್ಲಿ ವೈದ್ಯಾಧಿಕಾರಿಗಳಿದ್ದರು. ಆಯುಷ್ಮಾನ್ ಕೇಂದ್ರದಲ್ಲಿ ರೋಗ ಬರದಂತೆ ತಡೆಯುವ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಇಲ್ಲಿ ಕಮ್ಯುನಿಟಿ ಹೆಲ್ತ್ ಆಫೀಸರ್, ನರ್ಸ್ ಅಥವಾ ಎಂ.ಬಿ.ಬಿ.ಎಸ್. ವೈದ್ಯರು ಇರುತ್ತಾರೆ.

ಏನೇನು ಸೌಲಭ್ಯ?

-ಸಾಮಾನ್ಯ ಕಾಯಿಲೆಗಳು, ಜ್ವರ, ಕೆಮ್ಮು, ಸಣ್ಣಪುಟ್ಟ ಗಾಯಗಳಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ.
-ಔಷಧಗಳು ಮತ್ತು ಸಾಮಾನ್ಯ ರಕ್ತ/ ಮೂತ್ರ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
-ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಧುಮೇಹ, ರಕ್ತದೊತ್ತಡ, ಮಹಿಳೆಯರಲ್ಲಿ ವಿವಿಧ ಮಾದರಿಯ ಕ್ಯಾನ್ಸರ್ ಆರಂಭದಲ್ಲೇ ಪತ್ತೆಗೆ ತಪಾಸಣೆ.
-ಗರ್ಭಿಣಿಯರ ತಪಾಸಣೆ, ಹೆರಿಗೆ ಪೂರ್ವ ಮತ್ತು ನಂತರದ ಆರೈಕೆ, ಮಕ್ಕಳಿಗೆ ಲಸಿಕೆ ನೀಡುವ ಸೇವೆಗಳು ಲಭ್ಯ.
-ಇಲ್ಲಿನ ಸಿಬ್ಬಂದಿ ವಿಡಿಯೋ ಕರೆ ಮೂಲಕ ಜಿಲ್ಲಾ ಅಥವಾ ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ರೋಗಿಗಳನ್ನು ಸಂಪರ್ಕಿಸಿ ಉಚಿತ ಸಲಹೆ ಕೊಡಿಸುತ್ತಾರೆ.
-ಕೇವಲ ರೋಗ ಬಂದಾಗ ಚಿಕಿತ್ಸೆ ನೀಡುವುದಲ್ಲದೆ ಆರೋಗ್ಯವಾಗಿರಲು ಯೋಗ ತರಬೇತಿ ಮತ್ತು ಉತ್ತಮ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು ನಾಲ್ಕು ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡಗಳನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೋಗ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ದಿನಾಂಕ ನಿಗದಿಪಡಿಸಿಕೊಂಡು, ನಾಲ್ಕೂ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

— ಡಾ.ಬಸವರಾಜ ಹುಬ್ಬಳ್ಳಿ ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net