ಉಡುಪಿಯಲ್ಲಿ ಹಿರಿಯ ನಾಗರಿಕರಿಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕೆ. ಮುರಳೀಧರ್ ಮಾತನಾಡಿದರು. ರವಿರಾಜ್ ನಾಯಕ್, ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಕೆ. ಸದಾನಂದ ಹೆಗ್ಡೆ, ನಂದಕುಮಾರ್, ಜಯಾ ತಂತ್ರಿ ಇದ್ದರು.
ಉಡುಪಿ: ಇಂದಿನ ಆಧುನಿಕ ಯುಗದಲ್ಲಿ ಸೈಬರ್ ವಂಚನೆಗೆ ಬಲಿಯಾಗುತ್ತಿರುವುದು ಸಾಮಾನ್ಯವಾಗುತ್ತಿದ್ದು ಆತಂಕದ ವಿಚಾರ. ಈ ಕುರಿತಾಗಿ ಅರಿವು ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕು. ಅದರಲ್ಲಿಯೂ ಹಿರಿಯ ನಾಗರಿಕರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತರಬೇತುದಾರ ರವಿರಾಜ್ ನಾಯಕ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ರೆಡ್ ಕ್ರಾಸ್ ಭವನದಲ್ಲಿ ಉಡುಪಿ ಹಿರಿಯ ನಾಗರಿಕರ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಉಡುಪಿ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಕೆ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇನ್ನರ್ ವೀಲ್ ಕ್ಲಬ್ನ ಕುರಿತು ಮಾಲತಿ ತಂತ್ರಿ ಹಾಗೂ ಕ್ಲಬ್ನ ಕಾರ್ಯದರ್ಶಿ ಶೈಲಾ ಮಯ್ಯ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಹಿರಿಯ ನಾಗರಿಕ ಸಂಸ್ಥೆಯ ಗೌರವಾಧ್ಯಕ್ಷ ಕೆ. ಸದಾನಂದ ಹೆಗ್ಡೆ, ಕಾರ್ಯದರ್ಶಿ ನಂದಕುಮಾರ್ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಜಯಾ ತಂತ್ರಿ ವಂದಿಸಿದರು.