ಹುಚ್ಚುನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಮೊಗ್ರಾಲ್ ಪುತ್ತೂರು ಪಂಚಾಯಿತಿ ಎದುರು ಬಿಜೆಪಿ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದರು. ಶ್ರೀವಿದ್ಯಾ, ವಸಂತಿ, ಮಲ್ಲಿಕಾ ಇತರರು ಇದ್ದರು.
ಕುಂಬಳೆ: ಸ್ಥಳೀಯ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚುನಾಯಿಗಳ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಂಡು ಜನರ ಜೀವ ರಕ್ಷಿಸಬೇಕೆಂದು ಒತ್ತಾಯಿಸಿ ಪಂಚಾಯಿತಿಯ ಬಿಜೆಪಿ ಸದಸ್ಯರು ಮೊಗ್ರಾಲ್ ಪುತ್ತೂರು ಪಂಚಾಯಿತಿ ಕಚೇರಿ ಮುಂದೆ ಮಂಗಳವಾರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಹುಚ್ಚುನಾಯಿಗಳ ಹಾವಳಿ ಮಿತಿ ಮೀರಿದೆ. ಅಲ್ಲದೆ ಬಿಡಾಡಿ ದನಗಳ ಉಪಟಳವೂ ಹೆಚ್ಚಾಗಿದ್ದು ಅವುಗಳನ್ನು ಹಿಡಿದು ಪಂಚಾಯಿತಿಯ ದೊಡ್ಡಿಯಲ್ಲಿ ಕಟ್ಟಿಹಾಕಬೇಕು. ಜನರು ಮುಂಜಾಗ್ರತೆ ಕ್ರಮ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದ ಸತ್ಯಾಗ್ರಹನಿರತರು, ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದರು.
ಹುಚ್ಚುನಾಯಿಗಳ ಕಡಿತಕ್ಕೊಳಗಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದ್ದರಿಂದ ಜನರ ಸುರಕ್ಷತೆಯನ್ನು ಖಚಿತಪಡಿಸಲು ಪಂಚಾಯಿತಿಯು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಂಚಾಯಿತಿಯ ಬಿಜೆಪಿ ಸದಸ್ಯರಾದ ಶ್ರೀವಿದ್ಯಾ, ವಸಂತಿ, ಮಲ್ಲಿಕಾ, ಪ್ರಮೀಳಾ ಮತ್ತಿತರರು ಇದ್ದರು.