ಮಾದಕವಸ್ತು ಮಾರಾಟ ಯತ್ನ, ಓರ್ವ ಸೆರೆ

ನೌಫಲ್
ನೌಫಲ್
Published on
ಬೆಳ್ತಂಗಡಿ: ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲ ನಿವಾಸಿ ನೌಫಲ್(31) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಆನಂದ್ ಎಂ. ಮತ್ತು ತಂಡ ಶುಕ್ರವಾರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ರೆಂಕೆದಗುತ್ತು ಎಂಬಲ್ಲಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಓರ್ವ ಪ್ಲಾಸ್ಟಿಕ್ ಚೀಲ ಹಿಡಿದು ಬೈಕ್ ಬಳಿ ನಿಂತುಕೊಂಡಿದ್ದ. ವಿಚಾರಿಸಿ ಚೀಲ ಪರಿಶೀಲಿಸಿದಾಗ ಮಾರಾಟ ಮಾಡಿ ಉಳಿದ ಸುಮಾರು 14 ಗ್ರಾಂ ಗಾಂಜಾ ಪತ್ತೆಯಾಗಿದೆ. ಮದಡ್ಕ್ಕದ ರಫೀಕ್ ಎಂಬಾತನಿಂದ ಖರೀದಿಸಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ. 14 ಗ್ರಾಂ ಗಾಂಜಾ, ಬೈಕ್, ಬ್ಯಾಟರಿ ಚಾಲಿತ ತೂಕದ ಮಾಪನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮದಡ್ಕ ನಿವಾಸಿ ರಫೀಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿನಿಮೀಯ ಕಾರ್ಯಾಚರಣೆ, ಆರೋಪಿಗಳ ಬಂಧನ

ಸುಬ್ರಹ್ಮಣ್ಯ: ಬೆಳಗಾವಿ ಜಿಲ್ಲೆಯ ಹಲವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಶುಕ್ರವಾರ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಕಳೆದೊಂದು ತಿಂಗಳನಿಂದ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಆರೋಪಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು.
ಸ್ಥಳೀಯರು ಹಾಗೂ ಆಟೋ ಚಾಲಕರ ಸಹಕಾರದೊಂದಿಗೆ ಆರೋಪಿಗಳು ಪ್ರಯಾಣಿಸುತ್ತಿದ್ದ ತೂಫಾನ್ ವಾಹನವನ್ನು ಲಾರಿಯ ಮೂಲಕ ರಸ್ತೆಗೆ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆಯಲಾಯಿತು. ಬಂಧಿತರನ್ನು ಬೆಳಗಾವಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಮುಂದಿನ ತನಿಖೆಯನ್ನು ಬೆಳಗಾವಿ ಪೊಲೀಸರು ನಡೆಸಲಿದ್ದಾರೆ.

ಮಹಿಳೆ ಕುಸಿದು ಬಿದ್ದು ಮೃತ್ಯು

ಪುತ್ತೂರು ಗ್ರಾಮಾಂತರ: ಬೀಡಿ ಬ್ರಾೃಂಚ್‌ಗೆ ಹೋಗುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಬೀಡಿ ಕಾರ್ಮಿಕ ಮಹಿಳೆ, ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ನಿವಾಸಿ ಶೇಷಪ್ಪ ಗೌಡ ಅವರ ಪತ್ನಿ ಗೋಪಿ (62) ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಗೋಪಿ ಅವರನ್ನು ಸ್ಥಳೀಯರು ಕೂಡಲೇ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪುತ್ರ ಮಹೇಶ್ ನೀಡಿರುವ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net