ಹಾವೇರಿ ಮೂಲದ ಕಿಂಗ್ಸ್ ಬಜಾರ್ ಮೇಲೆ ದಾಳಿ

Crime
Crime
Published on

ಕಡಬ: ಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಸುತ್ತಿದ್ದ ಸಭೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಹಾವೇರಿ ಮೂಲದ ಕಿಂಗ್ಸ್ ಬಜಾರ್ ಹೆಸರಿನ ಹಣ ಸಂಗ್ರಹದ ಜಾಲ ಪತ್ತೆ ಹಚ್ಚಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಹಣದ ಲಾಭದ ಆಮಿಷವೊಡ್ಡಿ ನಿಷೇಧಿತ ಹಣ ಪರಿಚಲನಾ ಯೋಜನೆ ನಡೆಸುತ್ತಿದ್ದ ಆರೋಪದ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಂಗ್ಸ್ ಬಜಾರ್ ಸಂಸ್ಥೆಯ ಮಾಲೀಕರು/ಸಂಸ್ಥೆಯನ್ನು ಮೊದಲ ಆರೋಪಿಯನ್ನಾಗಿ ದಾಖಲಿಸಲಾಗಿದ್ದು, ಕೊಕ್ಕಡ, ಪುತ್ತೂರು ಮತ್ತು ಕಡಬ ಮೂಲದವರಾದ ಸುಬ್ರಹ್ಮಣ್ಯ ಶಗ್ರಿತ್ತಾಯ(50), ಗುರುಮೂರ್ತಿ(54), ಸುರೇಶ್ ಆರ್.(55), ಬಾಲಕೃಷ್ಣ ಪಿ.ಎಚ್.(42), ಕಿರಣ್ ಕುಮಾರ್(21), ಶ್ರೀನಾಥ್ (48) ಹಾಗೂ ಸಂದೇಶ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಆ.23ರಂದು ಕಡಬ ಪೊಲೀಸ್ ಠಾಣೆಯ ಗುಪ್ತವಾರ್ತೆ ಸಿಬ್ಬಂದಿ ಮಹೇಶ್ ಎಂಬುವರಿಗೆ ಸಭೆ ಬಗ್ಗೆ ಮಾಹಿತಿ ಲಭಿಸಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸಾರ್ವಜನಿಕರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಂಡು ಹಣ ಹೂಡಿಕೆ ಮಾಡುವ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ.
ಕಂಪನಿಗೆ ಸದಸ್ಯರಾದರೆ ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಬೆಲೆಬಾಳುವ ವಸ್ತು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಪ್ರತಿದಿನ ಕಮಿಷನ್ ಪಡೆಯಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಲಾಗುತ್ತಿತ್ತು. ಹಣದ ವಹಿವಾಟು ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net