ಅಸೈಗೋಳಿ ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚುತ್ತಿದೆ. ಹಂಪ್ಸ್ ಬೇಡಿಕೆ ಬಗ್ಗೆ ಕಾನೂನು ಮಾತನಾಡುವ ಅಧಿಕಾರಿಗಳು ತೊಕ್ಕೊಟ್ಟಿನಿಂದ ಮುಡಿಪುವರೆಗೆ ಇರುವ ಹಂಪ್ಸ್‌ಗಳನ್ನು ತೆಗೆಯಲಿ, ಇಲ್ಲವೇ ನಮ್ಮ ಬೇಡಿಕೆ ಈಡೇರಿಸಲಿ ಎಂದು ಸಾಮಾಜಿಕ ಕಾರ್ಯಕರ್ತ ಅರುಣ್ ಡಿಸೋಜ ಆಗ್ರಹಿಸಿದರು.
ರಸ್ತೆ ಅಗಲೀಕರಣ ಬಳಿಕ ವಾಹನಗಳ ಮಿತಿಮೀರಿದ ವೇಗದಿಂದಾಗಿ ಅಸೈಗೋಳಿ ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪ್ಸ್ ಅಳವಡಿಸುವಂತೆ ಒತ್ತಾಯಿಸಿ ಸೋಮವಾರ ಆಟೋರಿಕ್ಷಾ ಚಾಲಕ-ಮಾಲೀಕರು ಹಾಗೂ ಸಾರ್ವಜನಿಕರಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದೊಂದು ತಿಂಗಳಿಂದ ಮೋರಿ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಲಾಗಿದೆ. ಈಗಾಗಲೇ ಐದು ಅಪಘಾತ ಸಂಭವಿಸಿ ಮೂವರ ಕಾಲು ಮುರಿದಿದ್ದರೆ, ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮಣ್ಣು ಅಗೆಯಲಾದ ಪರಿಣಾಮ ಮರದ ಬೇರುಗಳು ಮೇಲ್ಭಾಗದಲ್ಲಿದ್ದು ಮಳೆಗಾಲದಲ್ಲಿ ಆಗುವ ಅನಾಹುತಗಳಿಗೆ ಲೋಕೋಪಯೋಗಿ ಇಲಾಖೆ ಹೊಣೆ ಹೊತ್ತುಕೊಳ್ಳುತ್ತಾ ಎಂದು ಪ್ರಶ್ನಿಸಿದರು.
ಅಸೈಗೋಳಿಯಲ್ಲಿ ರಸ್ತೆ ಸುಂದರವಾಗಿ ನಿರ್ಮಾಣಗೊಂಡಿದೆ. ಆದರೆ ಸಾರ್ವಜನಿಕರಿಗೆ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಕಾರಣ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಕಾಮಗಾರಿ ಸಂದರ್ಭ ತೆರವುಗೊಳಿಸಲಾದ ಆಟೋ ಮತ್ತು ಟೆಂಪೋ ಪಾರ್ಕ್, ಬಸ್ ತಂಗುದಾಣವೂ ನಿರ್ಮಾಣಗೊಂಡಿಲ್ಲ.