ಬಂಟ್ವಾಳ: ನಾಲ್ಕು ದಶಕಗಳ ಹಿಂದೆ ಕೊಳ್ನಾಡು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೊಂದು ಸ್ಥಾಪನೆಯಾಗಲು ಶಾಲಾ ಪರಿಸರದ ಅನೇಕ ಹಿರಿಯರು ಕಾರಣಕರ್ತರಾಗಿದ್ದಾರೆ. ವಿದ್ಯಾಭಿಮಾನಿಗಳ ಆಶಯದಂತೆ ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದು ಶಾಲೆಯ ಸುವರ್ಣ ಮಹೋತ್ಸವದ ಈ ಸಂಭ್ರಮದಲ್ಲಿ ಸಹಭಾಗಿಗಳಾಗಬೇಕು ಎಂದು ಹಳೇ ವಿದ್ಯಾರ್ಥಿ ಹಾಗೂ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಹೇಳಿದರು.
ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸುವರ್ಣ ಸಂಭ್ರಮದ ಪೂರ್ವಭಾವಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ತರಗತಿ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಹಳೇ ವಿದ್ಯಾರ್ಥಿ ಮಾಧವ ಮಾವೆ ಮಾತನಾಡಿ, ಕಲಿತ ಶಾಲೆ, ಹೆತ್ತ ತಂದೆ-ತಾಯಿ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಶಾಲೆಯ ಆಶೋತ್ತರಗಳನ್ನು ಈಡೇರಿಸಲು ನಾವೆಲ್ಲ ಕಟಿಬದ್ಧರಾಗಬೇಕು ಎಂದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷೆ ಮಮತಾ ಪಿ.ಶೆಟ್ಟಿ ಮಾತನಾಡಿದರು. ಹಳೇ ವಿದ್ಯಾರ್ಥಿ, ಅಮೆರಿಕ ಉದ್ಯಮಿ ವೆಂಕಟೇಶ್ ನಾಯ್ಕ ನಿರ್ಬೈಲು ಕೊಡುಗೆಯಾಗಿ ನಿರ್ಮಿಸಿದ ತರಗತಿ ಕೊಠಡಿಯನ್ನು ವಿಶ್ವನಾಥ ನಾಯ್ಕ ಉದ್ಘಾಟಿಸಿದರು.
ಎಂಆರ್‌ಪಿಎಲ್ ಅನುದಾನದಿಂದ ನಿರ್ಮಾಣವಾದ ಸೋಲಾರ್ ವಿದ್ಯುತ್ ಘಟಕವನ್ನು ಹಳೇ ವಿದ್ಯಾರ್ಥಿ ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿ ರವೀಣ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ.ಎಲ್. ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಂಚಿ ಅಧ್ಯಕ್ಷತೆ ವಹಿಸಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್‌ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಸುಶೀಲಾ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶಾಂತಾ ಎಸ್. ವಂದಿಸಿದರು. ತಾರಾನಾಥ್ ಕೈರಂಗಳ ನಿರೂಪಿಸಿದರು.