

ಉಡುಪಿ: ರಾಜ್ಯದ ಕಡಲ ಸಾಮರ್ಥ್ಯವನ್ನು ಸ್ಪಷ್ಟ ಆರ್ಥಿಕ ಅವಕಾಶಗಳಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಎಂಟು ಕಡಲ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಲಭಿಸಿದೆ. ಈ ಯೋಜನೆಗಳನ್ನು ಮುನ್ನಡೆಸಲು ಕರ್ನಾಟಕ ಜಲಸಾರಿಗೆ ಮಂಡಳಿ ಸಜ್ಜಾಗಿದ್ದು, ಯೋಜನೆಗಳ ಟೆಂಡರ್ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ತಿಳಿಸಿದರು.
ಬೆಂಗಳೂರಿನಲ್ಲಿರುವ ಸರ್ಕಾರದ ಕಾರ್ಯದರ್ಶಿ ಕಚೇರಿಯಲ್ಲಿ ಸೋಮವಾರ (ನ.16) ನಡೆದ 7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯಲ್ಲಿ ಅನುಮೋದಿತ ಎಂಟು ಕಡಲ ಯೋಜನೆಗಳನ್ನು ಒಳಗೊಂಡ, 8,295 ಕೋಟಿ ರೂ. ಹೂಡಿಕೆ ಸಾಮರ್ಥ್ಯದ ಮಾರುಕಟ್ಟೆ ಸಾಮಗ್ರಿಗಳು ಮತ್ತು ಹೂಡಿಕೆದಾರರ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಮೂಲಸೌಕರ್ಯಕ್ಕೆ ಆದ್ಯತೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರ ಸಮರ್ಥ ನಾಯಕತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಈ ಕೈಪಿಡಿ ಸಹಕಾರಿಯಾಗಲಿದೆ. ಉದ್ದೇಶಿತ ಯೋಜನೆಗಳ ಅನುಷ್ಠಾನ ತ್ವರಿತಗೊಳಿಸುವಿಕೆ, ಹೂಡಿಕೆ ಅವಕಾಶಗಳನ್ನು ತೆರೆಯುವುದು ಮತ್ತು ಕರ್ನಾಟಕದ ಕಡಲ ಮೂಲಸೌಕರ್ಯ ಬಲಪಡಿಸಲು ಆದ್ಯತೆ ನೀಡಲಾಗುವುದು ಎಂದರು.
ಮಹತ್ವದ ಕಡಲ ಯೋಜನೆಗಳನ್ನು ಮುನ್ನಡೆಸಲು ಹಾಗೂ ರಾಜ್ಯಾದ್ಯಂತ ಕಾರ್ಯತಂತ್ರ ಕೈಗೊಳ್ಳಲು ಚರ್ಚೆ ನಡೆಯಿತು.
ಸಭೆಯಲ್ಲಿ ಬಂದರುಗಳ ನಿರ್ದೇಶಕ ಹಾಗೂ ಕರ್ನಾಟಕ ಜಲ ಸಾರಿಗೆ ಮಂಡಳಿ ಸದಸ್ಯ ಕ್ಯಾಪ್ಟನ್ ಸಂಜಯ ಟಿ. ಉಗಲ್ಮುಗಲೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯದರ್ಶಿ ಡಾ. ವಿಶಾಲ ಆರ್., ಕರ್ನಾಟಕ ಜಲಸಾರಿಗೆ ಮಂಡಳಿಯ ಸಿಇಒ ಎಚ್.ಸಿ. ಬಾಲಚಂದ್ರ ಉಪಸ್ಥಿತರಿದ್ದರು.
ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಗ್ರಿಗಳು ರಾಜ್ಯದ ಕಡಲ ಯೋಜನೆಗಳ ಸರಣಿ, ಹೂಡಿಕ ಅವಕಾಶಗಳು ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒಂದೆಡೆ ಸೇರಿಸಿ, ದೇಸೀಯ ಹಾಗೂ ಜಾಗತಿಕ ಸಂಭಾವ್ಯ ಹೂಡಿಕೆದಾರರಿಗೆ ಕರ್ನಾಟಕದ ಕಡಲ ಸಾಮರ್ಥ್ಯದ ಸಮಗ್ರ ಚಿತ್ರಣ ಒದಗಿಸುತ್ತವೆ. ಈ ಉಪಕ್ರಮಗಳು ಹೂಡಿಕೆಗಳನ್ನು ಆಕರ್ಷಿಸುವ ಕಡಲ ಪರಿಸರ ವ್ಯವಸ್ಥೆ ಬಲಪಡಿಸುವ, ಉದ್ಯೋಗ ಸೃಷ್ಟಿಸುವ ಹಾಗೂ ರಾಜ್ಯದ ಕರಾವಳಿ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದರು.