ಪ್ರಧಾನ್ ರಾಜೀನಾಮೆಯಿಂದ ದೇಶವಿರೋಧಿ ಶಕ್ತಿಗಳಿಗೆ ನಿರಾಸೆ

 ಕಾಞಂಗಾಡು ನಾರ್ತ್ ಕೋರ್ಟ್ ಕಚೇರಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಕಾಞಂಗಾಡು ನಾರ್ತ್ ಕೋರ್ಟ್ ಕಚೇರಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
Published on
ಕಾಸರಗೋಡು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ನುಸುಳಿದ್ದ ದೇಶವಿರೋಧಿ ಶಕ್ತಿಗಳು ನಿರಾಶೆಗೊಂಡಿದ್ದು, ದೇಶಾದ್ಯಂತ ಗಲಭೆ ಸೃಷ್ಟಿಸುವ ಅವರ ಯತ್ನ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಸೆಲ್ ಸಂಚಾಲಕ ವಿ.ಕೆ.ಸಜೀವನ್ ಹೇಳಿದರು.
ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ಯತ್ನವನ್ನು ಖಂಡಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಾಞಂಗಾಡಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನಾ ಮಾರ್ಚ್‌ನಲ್ಲಿ ಮಾತನಾಡಿದರು.
ವಿದ್ಯಾರ್ಥಿ ಪ್ರತಿಭಟನೆಯನ್ನು ದೊಡ್ಡ ಮಟ್ಟದ ಸಂಘರ್ಷದತ್ತ ಕೊಂಡೊಯ್ಯುವ ದುರುದ್ದೇಶದಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರು ಪ್ರಧಾನಮಂತ್ರಿಗಳ ನಿವಾಸವಿರುವ ಅತಿ ಸುರಕ್ಷಿತ ಪ್ರದೇಶದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೇ ಕಾರಣಕ್ಕೆ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಬಲಪ್ರಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಹಾಗೂ ಆರ್ಥಿಕ ರಂಗದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಾಧಿಸಿದ ಪ್ರಗತಿಯಿಂದ ಅಸೂಯೆಗೊಂಡಿರುವ ಕೆಲವು ದೇಶವಿರೋಧಿ ಶಕ್ತಿಗಳು ದೇಶದಲ್ಲಿ ಆಂತರಿಕ ದಂಗೆಗೆ ಪ್ರಚೋದನೆ ನೀಡಿವೆ. ಇದಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ನೀಡಿರುವುದು ಖಂಡನೀಯ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಎ.ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನಿಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷ ಎಚ್.ಆರ್.ಸುಕನ್ಯಾ, ಎಂ.ಬಾಲ್‌ರಾಜ್, ರಾಜ್ಯ ಕೌನ್ಸಿಲ್ ಸದಸ್ಯರಾದ ಶಿವಕೃಷ್ಣ ಭಟ್, ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷರಾದ ಟಿ.ವಿ.ಶಿಬಿನ್, ಸಾಗರ್ ಚಾತ್ತಮತ್, ಪ್ರಶಾಂತ್, ಪ್ರದೀಪ್ ಎಂ., ದಿಲೀಪ್ ಪಳ್ಳಂಜಿ, ಗುರುಪ್ರಸಾದ್ ಪ್ರಭು, ಗೋಪಾಲಕೃಷ್ಣ ಎಂ., ವಿಕ್ರಮ್ ಪೈ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net