ಪರಿಹಾರದಿಂದ ಮತ್ತೊಂದು ಸಮಸ್ಯೆ!

ಕಿರು ಸೇತುವೆ
ಕಿರು ಸೇತುವೆ
Published on
 ಧನಂಜಯ ಗುರುಪುರ
 ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ (169) ವಿಸ್ತರಣೆ ಕಾಮಗಾರಿಯ ಅವೈಜ್ಞಾನಿಕತೆಯಿಂದಾಗಿ ಮಿಜಾರಿನ ಬೈತರಿ ಎಂಬಲ್ಲಿ ಕುಟುಂಬವೊಂದು ಈ ಬಾರಿಯ ಮಳೆಗಾಲದಲ್ಲೂ ಕೃತಕ ನೆರೆಯ ಆತಂಕ ಎದುರಿಸುವಂತಾಗಿದೆ.
 ಬೈತರಿ ನಿವಾಸಿ ಶ್ರೀನಿವಾಸ ಭಟ್ ಅವರ ಮನೆ ಪಕ್ಕದಲ್ಲಿ ಹರಿಯುವ ಪರಂಬೋಕು ತೋಡಿಗೆ ಹೆದ್ದಾರಿ ಪ್ರಾಧಿಕಾರ ಕಿರು ಸೇತುವೆಯೊಂದನ್ನು ನಿರ್ಮಿಸಿತ್ತು. ಆದರೆ ಇದರ ಅವೈಜ್ಞಾನಿಕ ವಿನ್ಯಾಸದಿಂದಾಗಿ ಕಳೆದ ವರ್ಷ ತೋಡು ಉಕ್ಕಿ ಹರಿದು ಮನೆಗೆ ನೀರು ನುಗ್ಗಿತ್ತು. ಪರಿಣಾಮ ಕುಟುಂಬವು ಮಧ್ಯರಾತ್ರಿ ಮನೆ ತೊರೆಯಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶಾಸಕ ಡಾ.ಭರತ್ ಶೆಟ್ಟಿ ಅವರ ಭೇಟಿ ಹಾಗೂ ಸೂಚನೆ ಮೇರೆಗೆ ಹಳೆಯ ಸೇತುವೆ ಪಕ್ಕದಲ್ಲೇ ಮತ್ತೊಂದು ಕಿರು ಸೇತುವೆ ನಿರ್ಮಿಸಲಾಗಿದೆ. ಆದರೆ, ತೋಡಿಗಿಂತ ಕಿರಿದಾಗಿರುವ ಈ ಹೊಸ ಸೇತುವೆಯೂ ನೀರಿನ ಸರಾಗ ಹರಿವಿಗೆ ತಡೆಯೊಡ್ಡುವಂತಿದ್ದು, ಭಟ್ ಕುಟುಂಬದ ಆತಂಕವನ್ನು ಇಮ್ಮಡಿಗೊಳಿಸಿದೆ.

ಅಧಿಕಾರಿಗಳ ಬೇಜವಾಬ್ದಾರಿ ಪ್ರತಿಕ್ರಿಯೆ

 ಈ ಗಂಭೀರ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಇಲಾಖೆಗೆ ಲಿಖಿತ ದೂರು ನೀಡಿದರೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಹೆದ್ದಾರಿ ಇಂಜಿನಿಯರ್‌ಗಳು ಹಾರಿಕೆಯ ಉತ್ತರ ನೀಡುತ್ತಿದ್ದರೆ, ಇತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಟುಂಬ ಸಮೇತ ಗಂಜಿಕೇಂದ್ರಕ್ಕೆ ತೆರಳಿ, ಅಗತ್ಯವಿದ್ದರೆ ದೋಣಿ ಕಳುಹಿಸುತ್ತೇವೆ ಎಂಬ ಬೇಜವಾಬ್ದಾರಿಯುತ ಪ್ರತಿಕ್ರಿಯೆ ನೀಡಿದ್ದಾರೆ. ಇಲಾಖೆಯ ತಪ್ಪುಗಳಿಗೆ ನಾವು ಏಕೆ ಗಂಜಿಕೇಂದ್ರಕ್ಕೆ ಹೋಗಬೇಕು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರತಿಭಟನೆಯ ಎಚ್ಚರಿಕೆ

 ಹಿಂದೆ ಇಲ್ಲಿನ ತೋಡಿನಲ್ಲಿ ಮಳೆನೀರು ಯಾವುದೇ ಅಡೆತಡೆಯಿಲ್ಲದೆ ಹರಿಯುತ್ತಿತ್ತು. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಕೃತಕ ನೆರೆ ಸೃಷ್ಟಿಯಾಗಿದೆ. ಈ ಸಮಸ್ಯೆಗೆ ತಕ್ಷಣವೇ ಸೂಕ್ತ ಪರಿಹಾರ ಒದಗಿಸದಿದ್ದರೆ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಸುಧಾಕರ ಪೂಂಜ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ, ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಇಲ್ಲಿಯವರೆಗೆ ಸೂಕ್ತ ಸ್ಪಂದನೆ ಇಲ್ಲ. ಈ ಮಳೆಗಾಲದಲ್ಲೂ ಮತ್ತೆ ಮನೆಗೆ ನೀರು ನುಗ್ಗುವ ಭೀತಿ ತಪ್ಪಿಲ್ಲ. ಆದಷ್ಟು ಶೀಘ್ರ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಈ ಮನೆಯಲ್ಲಿ ಜೀವನ ಕಷ್ಟ

— ಶ್ರೀನಿವಾಸ ಭಟ್, ಮನೆ ಯಜಮಾನ

ಕಳೆದ ಮಳೆಗಾಲದಲ್ಲಿ ನಾಲ್ಕೈದು ತಿಂಗಳ ಯಾತನೆ ಅನುಭವಿಸಿದ್ದೇವೆ. ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಮಳೆ ಹೆಚ್ಚಾದರೆ ನಿದ್ದೆ ಇಲ್ಲದ ರಾತ್ರಿ ಕಳೆಯಬೇಕಾಗುತ್ತದೆ.

— ಸುಕನ್ಯಾ ಭಟ್, ಶ್ರೀನಿವಾಸ ಭಟ್ಟರ ಪತ್ನಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net