ಉಡುಪಿ: ಕಾಲೇಜ್ ಜೀವನದಲ್ಲಿ ಲಭಿಸುವ ಸದವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವ ಮೂಲಕ ಮುಂದಿನ ಜೀವನ ಉತ್ತಮವಾಗಿ ರೂಪಿಸಿಕೊಳ್ಳಬೇಕು. ತಂತ್ರಜ್ಞಾನದ ಯುಗದಲ್ಲಿರುವ ತಾವುಗಳು ಕಾಲಹರಣ ಮಾಡದೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಸಲಹೆ ನೀಡಿದರು.
ಉಡುಪಿಯ ಕಲ್ಯಾಣಪುರ ಮಿಲಾಗ್ರಿಸ್ ಟೆ ಸೆಂಟಿನರಿ ಸಭಾಂಗಣದಲ್ಲಿ ಶುಕ್ರವಾರ (ಮೇ 8) ಆಯೋಜಿಸಿದ್ದ ಕಾಲೇಜ್ನ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪುರಸ್ಕಾರ ವಿತರಿಸಲಾಯಿತು.
ಮೌಲ್ಯಗಳ ಅರಿವೂ ಅಗತ್ಯ
ಕಾಲೇಜ್ನ ಶಿಕ್ಷಣ ಇಲಾಖೆ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಕವಿತಾ ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜ್ಗಳ ಪಠ್ಯ ವಿಷಯ ಎಷ್ಟು ಪ್ರಾಮುಖ್ಯವೋ ಅದರಂತೆ ಸಾಮಾಜಿಕ ಮೌಲ್ಯಗಳ ಅರಿವೂ ಅಗತ್ಯ. ಅದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಮಿಲಾಗ್ರಿಸ್ ಕಾಲೇಜ್ನಿಂದ ಅತ್ಯುತ್ತಮವಾಗಿ ನಡೆದಿದೆ ಎಂದರು.
ಭಾರತದ ಅಂಧರ ಕ್ರಿಕೆಟ್ ಅಸೋಸಿಯೇಶನ್ನ ವ್ಯವಸ್ಥಾಪಕಿ ಹಾಗೂ ಕಾಲೇಜ್ನ ಹಳೆಯ ವಿದ್ಯಾರ್ಥಿ ಶಿಖಾ ಶೆಟ್ಟಿ, ಮಿಲಾಗ್ರಿಸ್ ಪಿಯು ಕಾಲೇಜ್ನ ಪ್ರಾಂಶುಪಾಲ ವಂ.ಮೆಲ್ವಿನ್ ಮೆಂಡೊನ್ಸಾ ಶುಭ ಹಾರೈಸಿದರು. ಕಾಲೇಜ್ನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ವಾರ್ಷಿಕ ವರದಿ ಮಂಡಿಸಿದರು.
ಕಾಲೇಜ್ನ ಸಾಧಕರನ್ನು ಸನ್ಮಾನಿಸಲಾಯಿತು.
ಸಾಧಕರಿಗೆ ಸನ್ಮಾನ
ಕಾಲೇಜ್ನ ಸಾಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜ್ನ ಸಂಚಾಲಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಳ್ಳಲಿರುವ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ವಿವಿಧ ದತ್ತಿ ನಿಧಿ ಪುರಸ್ಕಾರ ವಿತರಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂಧ ಕಲಾವಿದರಿಗೆ ರಿದಮ್ ಪ್ಯಾಡ್ ಉಪಕರಣ ಹಸ್ತಾಂತರಿಸಲಾಯಿತು.
ಉಪಪ್ರಾಂಶುಪಾಲೆ ಸೋಫಿಯಾ ಡಾಯಸ್, ಎಸ್ಡಬ್ಲ್ಯೂಸಿ ನಿರ್ದೇಶಕಿ ಸುಷ್ಮಾ ಶೆಟ್ಟಿ, ರಾಧಿಕಾ ಪಾಟ್ಕರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಮೇಸ್ತ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ಸಾಲಿಯಾನ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲಾಯ್ನಲ್ ರೊವಿನ್ ಡಿಸಿಲ್ವಾ ಉಪಸ್ಥಿತರಿದ್ದರು.
ಕಾಲೇಜ್ನ ಸಾಧಕರನ್ನು ಸನ್ಮಾನಿಸಲಾಯಿತು.
ಶಾಲೆಟ್ ಮಥಾಯಸ್ ಸ್ವಾಗತಿಸಿದರು. ನಿಲೋಫರ್ ರಿಯಾ ಫೆರ್ನಾಂಡಿಸ್ ವಂದಿಸಿದರು. ಜಿವಿತಾ ಮತ್ತು ಆನ್ಸನ್ ಕಾರ್ಯಕ್ರಮ ನಿರೂಪಿಸಿದರು.