ಉಡುಪಿ: ಜಗತ್ತು ವೇಗವಾಗಿ ಮತ್ತು ಆಕರ್ಷಕವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಅವುಗಳ ಮೋಹಕ್ಕೆ ಒಳಗಾಗದೆ ಮನಸ್ಸು ನಿಗ್ರಹಿಸಿಕೊಂಡು, ಸರಿಯಾದ ರೀತಿಯಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಸಾಧನೆಗೆ ಸದಾ ಸಜ್ಜುಗೊಳಿಸುವುದೇ ಶಿಕ್ಷಣ. ನಿಮ್ಮ ಸಾಧನೆ ಇತರರಿಗೆ ಮಾದರಿಯಾಗಲಿ ಎಂದು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ಗುರುವಾರ (ಏ.30) ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕಲಿತ ಶಿಕ್ಷಣ ಸಾರ್ಥಕವಾಗಬೇಕು ಎಂದರು.
ಶ್ರೀಗಳ ದೂರದೃಷ್ಟಿತ್ವ
ಕೋಟ ಪಡುಕೆರೆಯ ಸ.ಪ್ರ.ದ. ಕಾಲೇಜ್ನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್ ಮಾತನಾಡಿ, 60 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿರುವ ಕಾಲೇಜ್ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ನಾವು ಕಾಲೇಜ್ ಆರಂಭಿಸಿದ ವಿಬುಧೇಶ ತೀರ್ಥ ಶ್ರೀಪಾದರ ದೂರದೃಷ್ಟಿತ್ವವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಿದೆ. ಸಂಸ್ಕಾರಯುತ ಹಾಗೂ ಸರಿಯಾದ ಶಿಕ್ಷಣ ನೀಡುವ ಮೂಲಕ ಈ ಸಂಸ್ಥೆಯು ಮನಷ್ಯತ್ವದೊಂದಿಗಿನ ನಾಗರಿಕ ಸಮಾಜ ನಿರ್ಮಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ ಎಂದರು.
ಕಾಲೇಜ್ನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್, ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ.ರಾಘವೇಂದ್ರ ಎಲ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಪ್ರಜ್ಞಾ ಮಾರ್ಪಳ್ಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಗನ್ ಕೆ. ಸುವರ್ಣ, ಧೀರಜ್, ಖುಷಿ ಶೆಟ್ಟಿ, ಉಜ್ವಲ್ ನಾಯಕ್ ಉಪಸ್ಥಿತರಿದ್ದರು.
ಕಾಲೇಜ್ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್ ಹೊಳ್ಳ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿನಾಯಕ್ ಪೈ ಬಿ. ವಂದಿಸಿದರು. ರಾನಿಯಾ ಕಾರ್ಯಕ್ರಮ ನಿರೂಪಿಸಿದರು.