ಉಡುಪಿಯ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪುಟ್ಟ ಬಾಲಕರ ಕಾಲಿಗೆ ಯಕ್ಷಗೆಜ್ಜೆ ಕಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅರಗ ಜ್ಞಾನೇಂದ್ರ, ರತ್ನಾಕರ್ ಶೆಟ್ಟಿ, ಎಂ.ಕೆ. ರಮೇಶ್ ಆಚಾರ್ಯ, ಸಂದೇಶ್ ಜವಳಿ, ಶೈಲೇಶ್ ತೀರ್ಥಹಳ್ಳಿ ಇತರರಿದ್ದರು.
Published on:
Copied
Follow Us
* ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಆಶಯ
* 'ಯಕ್ಷಭೂಮಿ'ಯ ವಾರ್ಷಿಕೋತ್ಸವ ಉದ್ಘಾಟನೆ
ಉಡುಪಿ: ಯಕ್ಷಗಾನ ಕಲಿತ ಮಕ್ಕಳು ಶೈಕ್ಷಣಿಕ, ಬೌದ್ಧಿಕವಾಗಿ ತುಂಬ ಸಬಲರಾಗುತ್ತಾರೆ. ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಇಂದು ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ದೃಷ್ಟಿಯಿಂದ ಯಕ್ಷಗಾನ ಅಧ್ಯಯನ ಕೇಂದ್ರಗಳಿಗೆ ಸಂಘ&ಸಂಸ್ಥೆಗಳು ಹಾಗೂ ಯಕ್ಷ ಅಭಿಮಾನಿಗಳ ಪ್ರೋತ್ಸಾಹ ಅತಿ ಅಗತ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಹೇಳಿದರು.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ಸಭಾಂಗಣದಲ್ಲಿ ಅಕಾಡೆಮಿ ಸಹಕಾರದಲ್ಲಿ ಯಕ್ಷಗುರು ಶೈಲೇಶ್ ತೀರ್ಥಹಳ್ಳಿ ಅವರ ಯಕ್ಷಗಾನ ಅಧ್ಯಯನ ಕೇಂದ್ರ 'ಯಕ್ಷಭೂಮಿ'ಯ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನಕ್ಕಿಲ್ಲ ಅಳಿವು
ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಯಕ್ಷಗಾನಕ್ಕೆ ಅಳಿವಿಲ್ಲ. ಅನೇಕ ಕಲೆಗಳು ನಶಿಸಿದ್ದರೂ ಯಕ್ಷಗಾನ ಮಾತ್ರ ನಿರಂತರ ಬೆಳೆಯುತ್ತಿದೆ. ಈ ಕಲೆಯು ಸಂಸ್ಕಾರ ಬೆಳೆಸುವ ಮೂಲಕ ಸನಾತನ ಧರ್ಮ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದೆ. ನಮ್ಮ ಮುಂದಿನ ತಲೆಮಾರು ಈ ಕಲೆಯನ್ನು ಅಪ್ಪಿಕೊಳ್ಳಬೇಕು, ಹಚ್ಚಿಕೊಳ್ಳಬೇಕು ಎಂದರು.
ಪ್ರಸಿದ್ಧ ಸ್ತ್ರೀ ವೇಷಧಾರಿ ನಾಗಭೂಷಣ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ಅರಗದ ಯಕ್ಷಮಿತ್ರ ಬಳಗ ಸಂಸ್ಥೆಗೆ ಗೌರವಾರ್ಪಣೆ ನಡೆಯಿತು.
ತೀರ್ಥಹಳ್ಳಿ ಪಪಂ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ಸಂದೇಶ್ ಜವಳಿ, ಖ್ಯಾತ ಸಂಗೀತ ವಿದ್ವಾನ್ ಉಡುಪಿಯ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು.
ಯಕ್ಷಭೂಮಿಯ ಪ್ರವರ್ತಕ ಶೈಲೇಶ್ ತೀರ್ಥಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಶ್ ಭಾರದ್ವಾಜ್ ಕಾರ್ಯಕ್ರಮ ನಿರ್ವಹಿಸಿದರು.
"
ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಶಿಷ್ಯರಾಗಿರುವ ಶೈಲೇಶ್ ತೀರ್ಥಹಳ್ಳಿ ಅವರು ಅಧ್ಯಯನ ಕೇಂದ್ರ ಆರಂಭಿಸಿ ಮಕ್ಕಳಿಗೆ, ಆಸಕ್ತರಿಗೆ ಯಕ್ಷಗಾನ ಕಲಿಸುತ್ತಿರುವುದು ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಪಾರಂಪರಿಕ ರೀತಿಯ ಯಕ್ಷಗಾನ ಶೈಲಿಯ ಅಧ್ಯಯನ ಅಗತ್ಯ. ಪಾಲಕರು ಯಾವುದೇ ಹಿಂಜರಿಕೆ ಇಲ್ಲದೆ ಮಕ್ಕಳನ್ನು ಯಕ್ಷಗಾನ ಕಲಿಯಲು ಕಳುಹಿಸಬೇಕು.