ದೇವರ ಪ್ರೀತಿಯಲ್ಲಿಲ್ಲ ಯಾವುದೇ ಸ್ವಾರ್ಥ

ಕೆರೆಕಟ್ಟೆಯಲ್ಲಿರುವ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವವನ್ನು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಹಾಗೂ ಫಿಲಿಪ್​ ಡಿಕೋಸ್ತಾ ಬಸ್ರೂರು ಉದ್ಘಾಟಿಸಿದರು. ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​, ಸ್ಟೀವನ್​ ಡಿಸೋಜಾ, ಪಾವ್ಲ್​ ರೇಗೊ, ಸುನೀಲ್​ ವೇಗಸ್​ ಇದ್ದರು.
ಕೆರೆಕಟ್ಟೆಯಲ್ಲಿರುವ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವವನ್ನು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಹಾಗೂ ಫಿಲಿಪ್​ ಡಿಕೋಸ್ತಾ ಬಸ್ರೂರು ಉದ್ಘಾಟಿಸಿದರು. ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​, ಸ್ಟೀವನ್​ ಡಿಸೋಜಾ, ಪಾವ್ಲ್​ ರೇಗೊ, ಸುನೀಲ್​ ವೇಗಸ್​ ಇದ್ದರು.
Published on

ಉಡುಪಿ ಬಿಷಪ್​ ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅಭಿಮತ

* ಕೆರೆಕಟ್ಟೆಯಲ್ಲಿ ಸಂತ ಅಂತೋನಿ ಚರ್ಚ್​ನ ವಾರ್ಷಿಕೋತ್ಸವ

* ನಿರ್ಗತಿಕರ ಆಶ್ರಮದ ಉದ್ಘಾಟನೆ

ಉಡುಪಿ: ದೇವರ ಪ್ರೀತಿ ಅನುಭವಿಸಲು ನಾವು ಯಾವುದೇ ದೊಡ್ಡ ಸಾಧನೆ ಮಾಡಬೇಕಿಲ್ಲ. ಶುದ್ಧ ಮನಸ್ಸು ಮತ್ತು ಭಕ್ತಿಯಿಂದ ನೆನೆದರೆ ಸಾಕು. ಆತನ ಪ್ರೀತಿಯು ಕಷ್ಟದ ಸಮಯದಲ್ಲಿ ಧೈರ್ಯ, ನೋವಿನಲ್ಲಿ ಸಾಂತ್ವನ ನೀಡುತ್ತದೆ. ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಅಪೇಕ್ಷೆ ಅಥವಾ ಷರತ್ತು ಇರುವುದಿಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅಭಿಮತ ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕಿನ ಸಿದ್ದಾಪುರದ ಕೆರೆಕಟ್ಟೆಯಲ್ಲಿರುವ ಸಂತ ಅಂತೋನಿ ಪುಣ್ಯಕ್ಷೇತ್ರ (ಚರ್ಚ್​)ದಲ್ಲಿ ಶನಿವಾರ (ಜೂ.13) ಆಯೋಜಿಸಿದ್ದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿದ ಆಶ್ರಮ ಉದ್ಘಾಟಿಸಿ, ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.
ನಿಸ್ವಾರ್ಥ ಸೇವೆ ಅಗತ್ಯ
ಮಾನವರ ಪ್ರೀತಿ ಕೆಲವೊಮ್ಮೆ ಕೊನೆಗೊಳ್ಳಬಹುದು. ಆದರೆ, ದೈವಿಕ ಪ್ರೀತಿಗೆ ಕೊನೆಯಿಲ್ಲ. ತಪ್ಪು ಮಾಡಿದಾಗಲೂ ದೇವರು ನಮ್ಮನ್ನು ಕ್ಷಮಿಸಿ, ಸರಿ ದಾರಿಯಲ್ಲಿ ನಡೆಸುತ್ತಾನೆ. ದೇವರ ಸ್ಮರಣೆಯಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ನಿಸ್ವಾರ್ಥದಿಂದ ಸೇವೆ ಮಾಡಿದರೆ ಪ್ರತಿಫಲ ಖಂಡಿತ ಎಂದರು.
ಮಹಾಪೋಷಕ ಫಿಲಿಪ್​ ಡಿಕೋಸ್ತಾ ಬಸ್ರೂರು ಅವರು ನಿರ್ಗತಿಕರ ಆಶ್ರಮ ಉದ್ಘಾಟಿಸಿದರು. ಆಶ್ರಮದ ನಿಮಾರ್ಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಮತ್ತು ಮಹೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. 
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​, ಕುಲಪತಿ ವಂ.ಸ್ಟೀವನ್​ ಡಿಸೋಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಪಾವ್ಲ್​ ರೇಗೊ, ಫ್ರಾನ್ಸಿಸ್ಕನ್​ ಸಿಸ್ಟರ್ಸ್​ ಆಫ್​ ದಿ ಇಮ್ಯಾಕುಲೆಟ್​ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಸಿ.ಎಲ್ಸಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಮಿಸಿದ ಧರ್ಮಗುರುಗಳು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ವಂ.ರೋಯ್​ ಲೋಬೊ ಹಾಗೂ ವಂ.ವಿಲ್ಸನ್​ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಪುಣ್ಯಕ್ಷೇತ್ರದ ರೆಕ್ಟರ್​ ವಂ.ಸುನೀಲ್​ ವೇಗಸ್​ ವಂದಿಸಿದರು.
"

ಧರ್ಮಪ್ರಾಂತ್ಯದಲ್ಲಿ ಜನರ ಆಧ್ಯಾತ್ಮಿಕ ಬೆಳವಣಿಗೆಗೆ ಮೊದಲ ಆದ್ಯತೆಯಾಗಿ ಶ್ರಮಿಸಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಲು ಪ್ರಯತ್ನ ಹಾಗೂ ಧರ್ಮಪ್ರಾಂತ್ಯದಲ್ಲಿ ಆರೋಗ್ಯ ಕ್ಷೇತ್ರ ಬಲಪಡಿಸಲು ಸುಸಜ್ಜಿತ ಆಸ್ಪತ್ರೆ ನಿಮಾರ್ಣದ ಚಿಂತನೆ ನಡೆಸಲಾಗಿದೆ. ಭಕ್ತರು ಹಾಗೂ ಉದಾರ ಮನಸ್ಸಿನ ದಾನಿಗಳು ಕೈ ಜೋಡಿಸಿದರೆ ಕನಸು ನನಸಾಗಲು ಹೆಚ್ಚು ಸಮಯ ಬೇಕಾಗಿಲ್ಲ.

— ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ. ಉಡುಪಿ ಬಿಷಪ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net