ಅತಿಥಿಗೃಹಕ್ಕೆ ಪ್ರಾಣಿಗಳ ಲಗ್ಗೆ!

 ಸೋರುತ್ತಿರುವ ಅತಿಥಿಗೃಹಕ್ಕೆ ಪ್ಲಾಸ್ಟಿಕ್ ಟಾರ್ಪಾಲಿನ ಹೊದಿಕೆ ಹಾಕಿರುವುದು.
ಸೋರುತ್ತಿರುವ ಅತಿಥಿಗೃಹಕ್ಕೆ ಪ್ಲಾಸ್ಟಿಕ್ ಟಾರ್ಪಾಲಿನ ಹೊದಿಕೆ ಹಾಕಿರುವುದು.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಜಿಲ್ಲೆಯ ಪ್ರಮುಖ ಸರ್ಕಾರಿ ಅತಿಥಿಗೃಹಗಳಲ್ಲಿ ಒಂದಾಗಿರುವ, ಗಣ್ಯರು ಹಾಗೂ ಅಧಿಕಾರಿಗಳ ಸಭೆ-ಸಮಾರಂಭಗಳಿಗೆ ನಿತ್ಯ ಆಶ್ರಯ ತಾಣವಾಗಿರುವ ಕಾರ್ಕಳ ಕೋರ್ಟ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಅಧೀನದ ಸರ್ಕಾರಿ ಅತಿಥಿಗೃಹ(ಐಬಿ) ಪ್ರಸ್ತುತ ವಾನರ ಸೇನೆ ಹಾಗೂ ನವಿಲುಗಳ ಹಾವಳಿಯಿಂದ ಸಂಕಷ್ಟ ಎದುರಿಸುವಂತಾಗಿದೆ.
ಕಾರ್ಕಳದ ಈ ಅತಿಥಿಗೃಹದಲ್ಲಿ ಸ್ಥಳೀಯರಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದ ಆಗಮಿಸುವ ಉನ್ನತ ನ್ಯಾಯಾಧೀಶರು, ಹಿರಿಯ ಸರ್ಕಾರಿ ಅಧಿಕಾರಿಗಳು ವಾಸ್ತವ್ಯ ಹೂಡುತ್ತಾರೆ. ಲೋಕಾಯುಕ್ತ ಸಭೆಗಳು, ಸಹಾಯಕ ಆಯುಕ್ತರ ಕಂದಾಯ ನ್ಯಾಯಾಲಯದ ವಿಚಾರಣೆಗಳು ಹಾಗೂ ಸಾರ್ವಜನಿಕ ಅಹವಾಲು ಸಭೆಗಳು ಇಲ್ಲಿಯೇ ಜರುಗುತ್ತವೆ.

ಅಧಿಕಾರಿಗಳ ವಾಸ್ತವ್ಯ

ಇತ್ತೀಚೆಗಷ್ಟೇ ಸಚಿವ ಸತೀಶ್ ಜಾರಕಿಹೊಳಿ ಅರ್ಧ ದಿನ ಇಲ್ಲಿಯೇ ಉಳಿದುಕೊಂಡು ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದರು. ಇಂತಹ ಪ್ರಮುಖ ಕಟ್ಟಡವೇ ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾಗಿರುವುದು ಕಳವಳಕಾರಿ ಸಂಗತಿ. ಕಟ್ಟಡದ ಮೇಲ್ಛಾವಣಿ ಏರುವ ಮಂಗಗಳು ಹಾಗೂ ನವಿಲುಗಳು ಹೆಂಚುಗಳನ್ನು ಎತ್ತಿ ಹಾನಿಗೊಳಿಸುತ್ತಿರುವ ಪರಿಣಾಮ ಮಳೆ ನೀರು ಕಟ್ಟಡದೊಳಗೆ ಸೋರುತ್ತಿದೆ. ಕಾರ್ಕಳ ಭಾಗದಲ್ಲಿ ಕಳೆದ ಕೆಲ ಸಮಯದಿಂದ ನಿರಂತರ ಮಳೆಯಾಗುತ್ತಿದ್ದು, ಮಳೆ ನೀರು ಒಳ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಟಾರ್ಪಾಲು ಹೊದಿಸಿ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಮಿತಿಮೀರಿದ ಕೋತಿಗಳ ಉಪಟಳ

ಕೇವಲ ಅತಿಥಿಗೃಹ ಮಾತ್ರವಲ್ಲದೆ, ಇಡೀ ಕಾರ್ಕಳ ನಗರದಲ್ಲೂ ಮಂಗಗಳ ಕಾಟ ಮಿತಿಮೀರಿದೆ. ಆಹಾರ ಹುಡುಕುತ್ತಾ ಪೇಟೆಗೆ ಲಗ್ಗೆ ಇಡುತ್ತಿರುವ ಮಂಗಗಳು ಆನೆಕೆರೆ, ಬೈಪಾಸ್, ನೆಕ್ಲಾಜೆ ಮತ್ತು ಜೋಡುರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಹೈರಾಣಾಗಿಸಿವೆ. ಹೋಟೆಲ್, ಬೇಕರಿ ಹಾಗೂ ಅಂಗಡಿಗಳ ಮುಂದೆ ಇಡುವ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವುದು, ಮನೆಗಳೊಳಗೆ ನುಗ್ಗಿ ಆಹಾರ ಸಾಮಗ್ರಿಗಳನ್ನು ದೋಚುವುದು, ಚಲಿಸುವ ವಾಹನಗಳ ಮೇಲೆ ಹಾರಿ ಸಂಚಾರಕ್ಕೆ ಅಡ್ಡಿಪಡಿಸುವುದು ನಿತ್ಯದ ಕತೆಯಾಗಿದೆ
ಮಂಗಗಳನ್ನು ಓಡಿಸಲು ವ್ಯಾಪಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಪಟಾಕಿ ಸಿಡಿಸಿದರೂ ಅವುಗಳು ಕ್ಯಾರೇ ಎನ್ನುತ್ತಿಲ್ಲ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಹಾಗೂ ಸ್ಥಳೀಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಕೊಠಡಿಗಳೊಳಗೆ ನೀರು ಸೋರಿಕೆ

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಂಗಗಳ ಗುಂಪು ಹಾಗೂ ನವಿಲುಗಳು ಕಟ್ಟಡದ ಮೇಲ್ಛಾವಣಿಗೆ ಏರುತ್ತವೆ. ಹೆಂಚುಗಳನ್ನು ಕಿತ್ತೆಸೆಯುವುದು, ಜಾರಿಸುವುದು ಮತ್ತು ಮೇಲ್ಛಾವಣಿ ಹಾನಿಗೊಳಿಸುವುದು ಸಾಮಾನ್ಯವಾಗಿದೆ. ಇದರಿಂದ ಮಳೆಗಾಲದಲ್ಲಿ ಕೊಠಡಿಗಳೊಳಗೆ ನೀರು ಸೋರಿಕೆಯಾಗುವ ಆತಂಕದಿಂದ ಟಾರ್ಪಾಲು ಹೊದಿಸಬೇಕಾಯಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಕಟ್ಟಡ ಸಾಕಷ್ಟು ಹಳೆಯದಾಗಿದ್ದು, ಕೆಲ ವರ್ಷಗಳ ಹಿಂದೆ ಹೊಸ ಕೊಠಡಿಗಳ ನಿರ್ಮಾಣ ನಡೆದಿದ್ದರೂ ಹಳೆಯ ಕಟ್ಟಡದ ಮೇಲ್ಛಾವಣಿ ಸರಿಪಡಿಸಿಲ್ಲ. ಇದೀಗ ದುರಸ್ತಿಗೆ ಒಳಪಡಬೇಕಾದ ಸ್ಥಿತಿಯಲ್ಲಿದೆ.

ಮಂಗ, ನವಿಲುಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅತಿಥಿಗೃಹದ ಮೇಲ್ಛಾವಣಿಗೆ ತೊಂದರೆಯಾಗಿದ್ದು, ಸದ್ಯ ಟಾರ್ಪಾಲು ಹೊದಿಕೆ ಅಳವಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲ ಮುಗಿದ ಬಳಿಕ ಮೇಲ್ಛಾವಣಿ ದುರಸ್ತಿ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

— ಸೋಮಶೇಖರ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net