ಆನೆಗುಂದಿ ಶ್ರೀ ಚಾತುರ್ಮಾಸ್ಯ ವ್ರತ

 ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ
ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆಯಲಿದೆ.
ಸ್ವಾಮೀಜಿ 50ನೇ ಜನ್ಮವರ್ಧಂತಿಯ ಸುವರ್ಣ ಸಂಭ್ರಮ ವರ್ಷಾಚರಣೆ ವೈದಿಕ ಸಂಪ್ರದಾಯ, ಧಾರ್ಮಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಸಮನ್ವಯದೊಂದಿಗೆ ನೆರವೇರಲಿದೆ. ಜುಲೈ 29ರಂದು ಬೆಳಗ್ಗೆ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಜನ್ಮವರ್ಧಂತಿ ವೈಭವ

ಆಗಸ್ಟ್ 9ರಂದು ಸ್ವಾಮೀಜಿ ಜನ್ಮವರ್ಧಂತಿ ಅಂಗವಾಗಿ ಯಜ್ಞಯಾಗಾದಿಗಳು, ಶ್ರೀ ಕನಕಧಾರಾ ಸ್ತೋತ್ರ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಸೇರಿದಂತೆ ವಿಶೇಷ ವೈದಿಕ ಕಾರ್ಯಕ್ರಮ, ಬೆಳಗ್ಗೆ 9ಕ್ಕೆ ಶ್ರೀಗಳ ತುಲಾಭಾರ ಸೇವೆ ಹಾಗೂ ನಂತರ ಧರ್ಮಸಂಸತ್ತು ಜರುಗಲಿದ್ದು, ಆಸ್ಥಾನ ವಿದ್ವಾಂಸರು ಭಾಗವಹಿಸಲಿದ್ದಾರೆ.

ಪ್ರತಿಭಾವಂತರಿಗೆ ಸನ್ಮಾನ

ಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಪದವಿಯ ರ‌್ಯಾಂಕ್ ವಿಜೇತರಿಗೆ, ವೃತ್ತಿಪರ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರು ಹಾಗೂ ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತರನ್ನು ಆ.23ರಂದು ಸನ್ಮಾನಿಸಲಾಗುವುದು ಎಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ ತಿಳಿಸಿದ್ದಾರೆ.

ಸುವರ್ಣ ಸಂಕಲ್ಪ ಅಭಿಯಾನ

ಶ್ರೀಗಳ 50ನೇ ಜನ್ಮವರ್ಧಂತಿ ಅಂಗವಾಗಿ ಒಂದು ವರ್ಷದ ಸುವರ್ಣ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಅಭಿಯಾನ ಅಂಗವಾಗಿ ಶ್ರೀ ಬಾಲ ಸರಸ್ವತೀ ಹೋಮ, ಪಂಚಪ್ರಬೋಧ ಜಾಗೃತಿ ಅಭಿಯಾನ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಚಿಂತನಮಂಥನ ಕಾರ್ಯಾಗಾರಗಳು ಮತ್ತು ಆನೆಗುಂದಿ ಕುಲಗುರು ಪೀಠ ಶ್ರೀ ಸರಸ್ವತೀ ದೇವಸ್ಥಾನದ ಶಿಲಾನ್ಯಾಸ ಸೇರಿದಂತೆ ಐದು ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

ವಿಶೇಷ ವೈದಿಕ ಕಾರ್ಯಕ್ರಮ

ಸೆ.20ರಂದು ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ ವಿಶೇಷ ಕಾರ್ಯಕ್ರಮವು ಶಿವಪಂಚಾಕ್ಷರೀ ಮಂತ್ರೋಪದೇಶ, ರುದ್ರಾಕ್ಷಿ ಪ್ರಸಾದ ವಿತರಣೆಯೊಂದಿಗೆ ನೆರವೇರಲಿದೆ. 26ರಂದು ಸೀಮೋಲ್ಲಂನ ಹಾಗೂ ಚಾತುರ್ವಾಸ್ಯ ಸವಾಪ್ತಿ ನಡೆಯಲಿದ್ದು, ವಿಶ್ವಕರ್ಮ ಯಜ್ಞ, ಧಾರ್ಮಿಕ ಸಭೆ ಹಾಗೂ ಆಶೀರ್ವಚನದೊಂದಿಗೆ ಸಮಾರೋಪಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net