ಹೆತ್ತಮ್ಮನ ಶವದ ಮುಂದೆ ಕಣ್ಣೀರಿಟ್ಟ ಭೂಗತ ಪಾತಕಿ!

ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಬೆಂಗಳೂರಿನ ಕಾರಾಗೃಹದಿಂದ ಉಡುಪಿಯ ಮಲ್ಪೆಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ ಹೆತ್ತಮ್ಮನ ಶವದ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿರುವುದು.
ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಬೆಂಗಳೂರಿನ ಕಾರಾಗೃಹದಿಂದ ಉಡುಪಿಯ ಮಲ್ಪೆಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ ಹೆತ್ತಮ್ಮನ ಶವದ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿರುವುದು.
Published on: 

* ತಾಯಿಯ ಅಂತ್ಯಕ್ರಿಯೆಯಲ್ಲಿ ರವಿ ಪೂಜಾರಿ ಭಾಗಿ

* ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆತಂದ ಪೊಲೀಸರು

ಉಡುಪಿ: ಬೆಂಗಳೂರು ಕಾರಾಗೃಹದಲ್ಲಿ ಬಂಧಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿ, ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ತನ್ನ ತಾಯಿ ಸುಶೀಲಾ ಪೂಜಾರ್ತಿ (86) ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾನೆ.

ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್​ ಬಂದೋಬಸ್ತ್​ನಲ್ಲಿ ಶುಕ್ರವಾರ ರಾತ್ರಿ ಉಡುಪಿಗೆ ಆಗಮಿಸಿ, ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಶನಿವಾರ ಬೆಳಗ್ಗೆ ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾನೆ.

ತಾಯಿಯ ಮೃತದೇಹ ಕಂಡ ತಕ್ಷಣ ದು:ಖದಿಂದ ನೆನೆದು ಬಿಕ್ಕಿಬಿಕ್ಕಿ ಅತ್ತನು. ಬಳಿಕ ಚಟ್ಟದ ಮುಂಭಾಗವನ್ನು ಹೊತ್ತು ರುದ್ರಭೂಮಿಗೆ ಸಾಗಿ ಕುಟುಂಬದವರೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡನು. ಬಳಿಕ ಆತನನ್ನು ಪೊಲೀಸ್​ ಭದ್ರತೆಯಲ್ಲಿ ಮತ್ತೆ ಬೆಂಗಳೂರಿನ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ತಾಯಿಯ ಅಂತ್ಯ ಸಂಸ್ಕಾರದಲ್ಲಿ ರವಿ ಪೂಜಾರಿ ಭಾಗಿಯಾಗಿರುವುದು.
ತಾಯಿಯ ಅಂತ್ಯ ಸಂಸ್ಕಾರದಲ್ಲಿ ರವಿ ಪೂಜಾರಿ ಭಾಗಿಯಾಗಿರುವುದು.

90ಕ್ಕೂ ಹೆಚ್ಚು ಪ್ರಕರಣ

ಭೂಗತ ಪಾತಕಿ ಛೋಟಾ ರಾಜನ್​ ಸಹಚರನಾಗಿದ್ದ ರವಿ ಪೂಜಾರಿ ಭೂಗತ ಜಗತ್ತಿನಲ್ಲಿ ಕುಖ್ಯಾತಿ ಗಳಿಸಿದ್ದನು. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಹಫ್ತಾ ವಸೂಲಿ ಸೇರಿದಂತೆ 90ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದರು. ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹಾಗೂ ಪ್ರಸ್ತುತ ಬೆಂಗಳೂರಿನ ಕಾರಾಗೃಹದಲ್ಲಿ ಕಳೆದ 6 ವರ್ಷದಿಂದ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿದ್ದಾನೆ.

ಮೂರು ದಶಕದ ಬಳಿಕ ಊರಿಗೆ

ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದಲ್ಲಿ ಜನಿಸಿದ್ದ ರವಿ ಪೂಜಾರಿ ಇಲ್ಲಿಯೇ ಬಾಲ್ಯ ಕಳೆದಿದ್ದು, ಆಂಗ್ಲ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಿದ್ದನು. 1980ರ ದಶಕದಲ್ಲಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದು, ಅನೇಕ ಅಪರಾಧ ಪ್ರಕರಣಗಳಿಂದಲೇ ಕುಖ್ಯಾತನಾಗಿದ್ದನು. ತಂದೆ ಸೂರ್ಯ ಪೂಜಾರಿ ಮುಂಬೈಯ ಶಿಪ್ಪಿಂಗ್​ ಕಾರ್ಪೊರೇಷನ್​ ಆಫ್​ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ರವಿ ಪೂಜಾರಿ ಸೇರಿ ಮೂವರು ಪುತ್ರರಿದ್ದಾರೆ. ರವಿ ಪೂಜಾರಿಗೆ ಪತ್ನಿ ಪದ್ಮಾ ಪೂಜಾರಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. 1992-93ರಲ್ಲಿ ಸಹೋದರಿಯರ ಮದುವೆಗೆ ಬಂದಿದ್ದು, ಬಳಿಕ ಹುಟ್ಟೂರಿನ ನಂಟು ಇರಲಿಲ್ಲ. ಇದೀಗ ಮೂರು ದಶಕದ ಬಳಿಕ ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಮಲ್ಪೆಗೆ ಬರುವಂತಾಗಿದೆ.

ವೆಚ್ಚ ಭರಿಸಲು ನ್ಯಾಯಾಲಯ ಆದೇಶ

ಅಂತ್ಯಕ್ರಿಯೆ ಮುಗಿದ ತಕ್ಷಣ ರವಿ ಪೂಜಾರಿಯನ್ನು ಮತ್ತೆ ಜೈಲಿಗೆ ಕರೆದೊಯ್ಯುವಂತೆ ನ್ಯಾಯಾಲಯ ಆದೇಶಿಸಿತ್ತು. ಆತನನ್ನು ಕರೆತರುವ ಮತ್ತು ಭದ್ರತೆ ಒದಗಿಸುವ ಪೊಲೀಸ್​ ಎಸ್ಕಾರ್ಟ್​ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನೂ ಸಹ ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.