ತಾಯಿಯನ್ನೇ ನೆರೆಮನೆಯವಳೆಂದ ಬುರ್ಖಾ ಮಹಿಳೆ?

ಹಿಂದೂ ಮಹಿಳೆಗೆ ನೆರವು ನೀಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಮೇ 16ರಂದು ಉಡುಪಿಯ ಗೆಸ್ಟ್​ಹೌಸ್​ನಲ್ಲಿ ವಿನಂತಿಸಿದ್ದ ಬುರ್ಖಾಧಾರಿ ಮಹಿಳೆಯರು.
ಹಿಂದೂ ಮಹಿಳೆಗೆ ನೆರವು ನೀಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಮೇ 16ರಂದು ಉಡುಪಿಯ ಗೆಸ್ಟ್​ಹೌಸ್​ನಲ್ಲಿ ವಿನಂತಿಸಿದ್ದ ಬುರ್ಖಾಧಾರಿ ಮಹಿಳೆಯರು.
Published on

* ಸಮಾಜಕ್ಕೆ ಸುಳ್ಳು ಹೇಳಿದ್ದಾರೆಂದ ನೀತಾ ಪ್ರಭು

* ಸಚಿವೆಯಿಂದ ಬೇಕಿಲ್ಲ ಸೌಹಾರ್ದದ ಉಪದೇಶ

ಉಡುಪಿ: ಹಿಂದೂ ಮಹಿಳೆಗೆ ನ್ಯಾಯ ನೀಡುವಂತೆ, ಉಪಕರಿಸಿ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಇಬ್ಬರು ಮುಸ್ಲೀಂ ಮಹಿಳೆಯರು ಉಡುಪಿಯಲ್ಲಿ ಬೇಡಿಕೊಂಡಿದ್ದ ಘಟನೆಯೀಗ ವಿವಾದಕ್ಕೆ ಕಾರಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಉಡುಪಿ ಗೆಸ್ಟ್​ಹೌಸ್​ಗೆ ಶನಿವಾರ (ಮೇ 16) ಹಿಂದೂ ಮಹಿಳೆಯೆಂದು ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಗಿರಿಜಾ ಶೆಟ್ಟಿಗಾರ್​ ಎಂಬ ವೃದ್ಧ ವಿಧವೆಯನ್ನು ಬುರ್ಖಾ ಧರಿಸಿದ್ದ ಇಬ್ಬರು ಮುಸ್ಲಿಂ ಮಹಿಳೆಯರು ಕರೆ ತಂದಿದ್ದರು. 'ಇವರು ಹಿಂದೂ ಮಹಿಳೆ. ನಮ್ಮ ನೆರೆಮನೆಯವರು. ಬಡ ಮಹಿಳೆಗೆ ಮಂಜೂರಾಗಿರುವ ನಿವೇಶನ ನೀಡಿ' ಎಂದು ಮನವಿ ಮಾಡಿದ್ದರು. ಬಳಿಕ ಸಚಿವೆ, 'ಇದು ನೋಡಿ ನಮ್ಮ ಭಾರತ. ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕು' ಎಂದಿದ್ದರು.

ಮತಾಂತರಗೊಂಡ ಪುತ್ರಿ?

ಉಸ್ತುವಾರಿ ಸಚಿವೆ ಲಕ್ಷ್ಮೀ, ಘಟನೆಯ ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಬಗ್ಗೆ ಬಿಟ್ಟಿ ಉಪದೇಶ ನೀಡಿದ್ದಾರೆ. ಅವರನ್ನು ಭೇಟಿಯಾಗಲು ಬಂದ ಗಿರಿಜಾ ಶೆಟ್ಟಿಗಾರ್​ ಅವರನ್ನು ಕರೆತಂದಿದ್ದು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿರುವ ಅವರ ಪುತ್ರಿಯೇ. ತಾನು ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಸಚಿವೆಯನ್ನೇ ಯಾಮಾರಿಸಿದ್ದಾರೆ. ಅವಸರ ಬುದ್ಧಿಯ ಹೆಬ್ಬಾಳ್ಕರ್​, ಹಿಂದೆಮುಂದೆ ಯೋಚಿಸದೆ ನಮಗೆ ಸೌಹಾರ್ದತೆಯ ಪಾಠ ಮಾಡಿದ್ದಾರೆ. ಬೆಳಗಾವಿಯಿಂದ ಬಂದ ಉಸ್ತುವಾರಿ ಸಚಿವೆಯಿಂದ ನಾವು ಸೌಹಾರ್ದತೆಯ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರಿಗೇ ಮೋಸ!

ಹಿಜಾಬ್​ ಬುರ್ಖಾ ಧರಿಸಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದ ಕೆಲ ಮುಸ್ಲಿಂ ಮಹಿಳೆಯರು ಇದೀಗ ಜಿಲ್ಲಾ ಉಸ್ತುವಾರಿ ಸಚಿವೆಗೇ ಮೋಸ ಮಾಡಿದ್ದಾರೆ. ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದ ಬುರ್ಖಾಧಾರಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಅತಿಥಿಯಂತೆ ಜಿಲ್ಲೆಗೆ ಆಗಮಿಸುವ ಹೆಬ್ಬಾಳ್ಕರ್​, ಬಿಟ್ಟಿ ಪ್ರಚಾರದ ತೆವಲಿಗೆ ಬಿಜೆಪಿಯನ್ನು ಟೀಕಿಸುವುದು ಬೇಡ. ಜಿಲ್ಲೆಯ 5 ಬಿಜೆಪಿ ಶಾಸಕರು ಹಾಗೂ ಸಂಸದರು ತಮ್ಮ ಬಳಿ ಸಮಸ್ಯೆ ನಿವಾರಣೆಗೆ ಬರುವ ನಾಗರಿಕರೊಂದಿಗೆ ಎಂದಿಗೂ ಜಾತಿ, ಧರ್ಮದ ಭೇದ-ಭಾವ ತೋರಿಲ್ಲ. ಆದರೆ, ರಾಷ್ಟ್ರ ವಿರೋಧಿಗಳು, ಮತೀಯ ಶಕ್ತಿಗಳ ವಿರುದ್ಧ ಎಂದಿಗೂ ರಾಜಿಯಾಗುವುದಿಲ್ಲ. ಇದನ್ನು ಸಚಿವೆ ಲಕ್ಷ್ಮೀ ಅರ್ಥ ಮಾಡಿಕೊಳ್ಳಲಿ ಎಂದು ನೀತಾ ಪ್ರಭು ಸಲಹೆ ನೀಡಿದ್ದಾರೆ.
"

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಎಳ್ಳು-ನೀರು ಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವೆಯ ಅವಿವೇಕದ ಮಾತು ಅಕ್ಷಮ್ಯ. ಜಿಲ್ಲೆಯ ಬಿಜೆಪಿ ನಾಯಕರು, ಜನಪ್ರತಿನಿಧಿಗಳ ವಿರುದ್ಧ ಬೇಜವಾಬ್ದಾರಿ ಹೇಳಿಕೆ ಮುಂದುವರಿಸಿದರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ತೀವ್ರ ಹೋರಾಟ ನಡೆಸಬೇಕಾಗುತ್ತದೆ.

— ಸಂಧ್ಯಾ ರಮೇಶ್​. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ.

ಮಾನವೀಯ ಆಧಾರದಲ್ಲಿ ಸ್ಪಂದಿಸಿ

* ಜಿಲ್ಲಾಧಿಕಾರಿಗೆ ಹೆಬ್ಬಾಳ್ಕರ್​ ಸೂಚನೆ  
ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಮನೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಬಂದಿದ್ದ ವೃದ್ಧ ಮಹಿಳೆ ಗಿರಿಜಾ ಶೆಟ್ಟಿಗಾರ್​ ಅಹವಾಲು ಆಲಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ತುರ್ತಾಗಿ ಸ್ಪಂದಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದಾರೆ. 1990ರಲ್ಲಿ ವಸತಿ ಯೋಜನೆಯಡಿ ಮಂಜೂರಾಗಿದ್ದ 5 ಸೆಂಟ್ಸ್​ ಜಾಗದ ಹಕ್ಕುಪತ್ರವಿದ್ದರೂ ಅರಣ್ಯ ಇಲಾಖೆಯು ಡೀಮ್ಡ್​ ಫಾರೆಸ್ಟ್​ ಎಂದು ಜಾಗದ ಸ್ವಾಧೀನಕ್ಕೆ ಆಕ್ಷೇಪಿಸಿದೆ. ಗ್ರಾಪಂ ಸಹ ಮನೆ ಕಟ್ಟಲು ಪರವಾನಗಿ ನೀಡದಿರುವ ವಿಚಾರ ತಿಳಿದುಬಂದಿದೆ ಎಂದು ಉಲ್ಲೇಖಿಸಿ, ಮಹಿಳೆಯ ಅರ್ಜಿ ಲಗತ್ತಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೈಗೊಂಡ ಕ್ರಮದ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net