ಭಾವನೆಗಳ ಅಭಿವ್ಯಕ್ತಿಗೆ ಪರಿಣಾಮಕಾರಿ ಮಾಧ್ಯಮ

ಎಸ್‌ಡಿಎಂ ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟಕ್ಕೆ ಪ್ರಾಂಶುಪಾಲ ಡಾ.ವಿಶ್ವನಾಥ ಚಾಲನೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್., ಕವಯಿತ್ರಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟಕ್ಕೆ ಪ್ರಾಂಶುಪಾಲ ಡಾ.ವಿಶ್ವನಾಥ ಚಾಲನೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್., ಕವಯಿತ್ರಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಾವ್ಯ ಎಂಬುದು ಮಾನವೀಯ ನೆಲೆಯಲ್ಲಿ ಮನಸ್ಸಿನ ಆಳದಿಂದ ಮೂಡುವ ಸಂವೇದನಾ ಪ್ರತಿಭೆ. ಕಾವ್ಯ, ಕವನಗಳು ಸಂತೋಷ, ದುಃಖ, ಪ್ರೀತಿ, ಪ್ರಕೃತಿ, ಸಮಾಜ ಮತ್ತು ಬದುಕಿನ ನಾನ ಮುಖಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸುತ್ತದೆ ಎಂದು ಸು ಫ್ರಮ್ ಸೋ ಸಿನಿಮಾ ಖ್ಯಾತಿಯ ಕವಯಿತ್ರಿ ಪೂರ್ಣಿಮಾ ಸುರೇಶ್ ಅಭಿಪ್ರಾಯಪಟ್ಟರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ವಿಭಾಗ ಆಯೋಜಿಸಿದ್ದ ಕಾವ್ಯ ಕಟ್ಟುವ ಬಗೆ ಕಾವ್ಯ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಅಕ್ಷರಗಳ ಮೋಹ ಹಾಗೂ ಸಾಹಿತ್ಯದ ಒಲವನ್ನು ಬೆಳೆಸಿಕೊಂಡಾಗ ರಸಭರಿತವಾದ ಜೀವನ ನಮ್ಮದಾಗುತ್ತದೆ. ಪರರ ನೋವು ಮತ್ತು ನಲಿವಿನೊಂದಿಗೆ ಬೆರೆತು ಸಮನ್ವಯದಿಂದ ಬದುಕುವ ಸಮಾಜ ರೂಪುಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಮಾತನಾಡಿ, ಕನ್ನಡ ಕಾವ್ಯ ಕಾಲಕ್ಕೆ ತಕ್ಕಂತೆ ಹೊಸ ರೂಪ ಮತ್ತು ಹೊಸ ವಿಚಾರ ಅಳವಡಿಸಿಕೊಂಡಿದೆ. ಈ ಸಮೃದ್ಧ ಪರಂಪರೆ ಮುಂದುವರಿಸುವ ಹೊಣೆಗಾರಿಕೆ ಇಂದಿನ ಯುವಜನತೆ ಮೇಲಿದೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯವನ್ನು ಕೇವಲ ಪರೀಕ್ಷೆ ವಿಷಯವಾಗಿ ಮಾತ್ರವಲ್ಲ, ಜೀವನ ಅರ್ಥಮಾಡಿಕೊಳ್ಳುವ ಸಾಧನವಾಗಿಯೂ ನೋಡಬೇಕಾಗಿದೆ ಎಂದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಕಾವ್ಯ ರಚನಾ ಕಮ್ಮಟ ನಡೆಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಉಪನ್ಯಾಸಕರಾದ ಡಾ.ದಿವಾಕರ ಕೊಕ್ಕಡ, ಡಾ.ನಾಗಣ್ಣ, ಡಾ.ರವಿಶಂಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವನಾ ನಿರೂಪಿಸಿದರು. ಸಹ ಪ್ರಾಧ್ಯಾಪಕ ಡಾ.ಹಳೆಮನೆ ರಾಜಶೇಖರ್ ಕಾರ್ಯಕ್ರಮ ಸಂಯೋಜಿಸಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ ಶಾಲಾ ಕಾಲೇಜುಗಳಲ್ಲಿ ಪಠ್ಯದ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನಾ ಚಟುವಟಿಕೆ ಗಳನ್ನು ಆಯೋಜಿಸಲಾಗುತ್ತದೆ. ಇದರ ಭಾಗವಾಗಿ ಇಂದು ಕಾವ್ಯ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಮತ್ತು ಹೊಸ ಸಾಹಿತ್ಯ ಸೃಷ್ಟಿಸಲು ಅಡಿಪಾಯವಾಗಿದೆ. ಕಾವ್ಯಗಳು ಮನಸುಗಳನ್ನು ಬೆಸೆಯುವಂತಾಗಲಿ.

— ಪ್ರೊ.ವಿಶ್ವನಾಥ್ ಪಿ., ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net