

ಉಡುಪಿ: ಪುತ್ತಿಗೆ ಮಠದಿಂದ ಫೀನಿಕ್ಸ್ನಲ್ಲಿ ನಿರ್ಮಾಣಗೊಳ್ಳಲಿರುವ ವೆಂಕಟಕೃಷ್ಣ ಮಂದಿರವು ಪಾರಂಪರಿಕ ಸೊಬಗಿನಿಂದ ಹಾಗೂ ಸುಂದರ ಕ್ಷೇತ್ರವಾಗಿ ರೂಪುಗೊಳ್ಳಲಿದೆ. ಈಗಾಗಲೇ ಅಮೆರಿಕದಲ್ಲಿ 11 ಶಾಖೆಗಳಿದ್ದು, ಒಟ್ಟು 18 ಮಂದಿರ ಕಟ್ಟುವ ಸಂಕಲ್ಪವಿದೆ. ಭವಿಷ್ಯದಲ್ಲಿ ಅಮೆರಿಕವೂ ಸಹ ಖ್ಯಾತ ಧಾರ್ಮಿಕ ಹಾಗೂ ತೀರ್ಥಕ್ಷೇತ್ರ ಆಗಲಿದೆ ಎಂದು ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.
ಅಮೆರಿಕದಲ್ಲಿರುವ ಪುತ್ತಿಗೆ ಮಠದ ಮೊದಲ ಶಾಖೆ ಫೀನಿಕ್ಸ್ನಲ್ಲಿ 15 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಕಟಕೃಷ್ಣ ಕ್ಷೇತ್ರದ ನೂತನ ದೇವಾಲಯಕ್ಕೆ ಭಾನುವಾರ (ಅ.25) ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಜ್ಞಾನದಾತನ ತಾಣ
ವೆಂಕಟೇಶನು ಅವತಾರಿಯಲ್ಲ. ಅದು ಶ್ರೀಕೃಷ್ಣನ ಒಂದು ಸ್ವರೂಪ. ವಿಠ್ಠಲನೂ ಸಹ ಅವತಾರಿಯಲ್ಲ. ಅದೂ ಸಹ ಕೃಷ್ಣನ ಇನ್ನೊಂದು ಸ್ವರೂಪ. ವೆಂಕಟೇಶ್ವರನೆಂದರೆ ಸಂಪತ್ತಿನ ದೇವರೆಂದು ನಂಬಿದ್ದಾರೆ. ಆದರೆ, ಆತ ಜ್ಞಾನದಾಯಕನಾಗಿದ್ದಾನೆ ಎಂದು ವಾದಿರಾಜರು ತಿಳಿಸಿದ್ದಾರೆ. ಉಡುಪಿಯ ಶ್ರೀಕೃಷ್ಣನ ಸಾನ್ನಿಧ್ಯ ಮತ್ತು ಪರ್ವತದ ಮೇಲಿರುವ ವೆಂಕಟೇಶ್ವರನ ಭವ್ಯತೆ ನೆನಪಿಸುವಂತಹ ವೆಂಕಟಕೃಷ್ಣನ ದಿವ್ಯ ಸಮಾಗಮವು ಇಲ್ಲಿನ ಜನರಿಗೆ ಭಕ್ತಿ, ನೆಮ್ಮದಿ ನೀಡಲಿದೆ. ಇದು ಜ್ಞಾನದಾತನ ತಾಣವಾಗಲಿದೆ ಎಂದರು.
ಪುತ್ತಿಗೆ ಮಠದ ರಾಘವೇಂದ್ರ ಭಟ್ಟ ಕೊಡಂಚ ಅವರು ಭೂಮಿಪೂಜೆಯ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ಕಿರಣ ಆಚಾರ್ಯ ಹಾಗೂ ದಾನಿಗಳು ಉಪಸ್ಥಿತರಿದ್ದರು.
ಶರದ್ ಪೂರ್ಣಿಮೆಯ ಶುಭ ಮುಹೂರ್ತದಲ್ಲಿ ಬೆಳಗ್ಗೆ 8:15ಕ್ಕೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ಶ್ರೀನಿವಾಸ ದೇವರ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಜಯಘೋಷ, ಶ್ರೀನಿವಾಸನ ನಾಮಸಂಕೀರ್ತನೆ ಮತ್ತು ಮಂಗಳವಾದ್ಯ ಮೊಳಗಿತು. ನೂರಾರು ಭಕ್ತರು ನಾಣ್ಯ, ಮುತ್ತು ಹಾಗೂ ರತ್ನಗಳನ್ನು ಸಮರ್ಪಿಸಿದರು. ಭಕ್ತರ ಸಹಕಾರದಿಂದ ಸುಮಾರು ನಾಲ್ಕು ಎಕರೆ ವಿಶಾಲ ಜಾಗದಲ್ಲಿ ದೇಗುಲ ನಿರ್ಮಾಣಗೊಳ್ಳಲಿದೆ ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದರು.