ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಿತರಕ್ಷಣೆಗೆ ತಿದ್ದುಪಡಿ ಅಗತ್ಯ

ಅಧ್ಯಾಪಕ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ನೀಡಿ ಮಾತುಕತೆ ನಡೆಸಿದರು.
ಅಧ್ಯಾಪಕ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ನೀಡಿ ಮಾತುಕತೆ ನಡೆಸಿದರು.
Published on
ಬದಿಯಡ್ಕ: ಮಲಯಾಳ ಭಾಷಾ ಅಧಿನಿಯಮ 2025ರ ಅಡಿಯಲ್ಲಿ ಕೇರಳದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಶೈಕ್ಷಣಿಕ ಮತ್ತು ಭಾಷಿಕ ಹಕ್ಕುಗಳನ್ನು ಸಂಪೂರ್ಣವಾಗಿ ಸಂರಕ್ಷಿಸಲು ಕಾಯ್ದೆಯ ಕಲಂ 6(1) ಕ್ಕೆ ತುರ್ತು ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು ನಿಯೋಗ ಕೇರಳ ಶಿಕ್ಷಣ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಲಯಾಳ ಭಾಷಾ ಅಧಿನಿಯಮ 2025ರಲ್ಲಿಯೇ ಭಾಷಾ ಅಲ್ಪಸಂಖ್ಯಾತರು ಎಂದರೆ ಸಂಪ್ರದಾಯಬದ್ಧವಾಗಿ ಕನ್ನಡ ಮತ್ತು ತಮಿಳು ಭಾಷೆಗಳನ್ನು ಬಳಸುವವರು ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಕಾಯ್ದೆಯ ಕಲಂ 7ರ ಅಡಿಯಲ್ಲಿ ನೀಡಲಾಗಿರುವ ಅಂಶವು ಭಾಷಾ ಅಲ್ಪಸಂಖ್ಯಾತರ ಆತಂಕವನ್ನು ಸಂಪೂರ್ಣ ನಿವಾರಿಸುವುದಿಲ್ಲ. ಆದ್ದರಿಂದ, ಕಾಯ್ದೆಯ ಕಲಂ 6(1)ಕ್ಕೆ ದ್ವಂದ್ವರಹಿತ ತಿದ್ದುಪಡಿ ತರಬೇಕು ಎಂದು ನಿಯೋಗ ಒತ್ತಾಯಿಸಿತು.
ಕೇರಳ ರಾಜ್ಯದಲ್ಲಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹತ್ತನೆ ತರಗತಿಯವರೆಗೆ ಮಲಯಾಳ ಕಡ್ಡಾಯ ಪ್ರಥಮ ಭಾಷೆಯಾಗಿರಬೇಕು ಎಂದು ಹೇಳಲಾಗಿದೆ. ಆದರೆ ರಾಜ್ಯದ ಭಾಷಾ ಅಲ್ಪಸಂಖ್ಯಾತರಿಗೆ ಈ ನಿಬಂಧನೆ ಅನ್ವಯಿಸುವುದಿಲ್ಲ. ತಿದ್ದುಪಡಿಯಿಂದ ಮಾತ್ರ ಭಾಷಾ ಅಲ್ಪಸಂಖ್ಯಾತರ ಶೈಕ್ಷಣಿಕ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಸಾಧ್ಯ ಎಂದು ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಅಹವಾಲು ಆಲಿಸಿದ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ ಎ., ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಇತರರಿದ್ದರು.

ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಕನ್ನಡ ಮಾಧ್ಯಮದ ಶಿಕ್ಷಕರಿಗೆ ಸಕಾಲದಲ್ಲಿ ಅಧಿಕೃತ ಅಧ್ಯಾಪಕರ ಕೈಪಿಡಿಯನ್ನು ಒದಗಿಸಬೇಕು. ಶಾಲಾ ಕಲೋತ್ಸವಗಳಲ್ಲಿ ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಪೂರಕವಾದ ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂಬ ಬೇಡಿಕೆಯನ್ನು ನಿಯೋಗ ಮಂಡಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net