ಅಂಬಲಪಾಡಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

 ಕೋಟ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿನ್ನಿಮೂಲ್ಕಿಯಲ್ಲಿ ಅಂಬಲಪಾಡಿ ಮೇಲ್ಸೇತುವೆ ಎಡಪಾರ್ಶ್ವವನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಕೋಟ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿನ್ನಿಮೂಲ್ಕಿಯಲ್ಲಿ ಅಂಬಲಪಾಡಿ ಮೇಲ್ಸೇತುವೆ ಎಡಪಾರ್ಶ್ವವನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
Published on
ಉಡುಪಿ: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮಂಗೂರಿನಿಂದ ಕುಂದಾಪುರಕ್ಕೆ ತೆರಳುವ ಒಂದು ಪಾರ್ಶ್ವವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕುಂದಾಪುರದಿಂದ ಮಂಗಳೂರಿಗೆ ತೆರಳು ಮಾರ್ಗವನ್ನು ಸೋಮವಾರ ತೆರೆಯಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಿನ್ನಿಮೂಲ್ಕಿಯಲ್ಲಿ ಅಂಬಲಪಾಡಿ ಮೇಲ್ಸೇತುವೆ ಎಡಪಾರ್ಶ್ವವನ್ನು ಸಂಚಾರಕ್ಕೆ ಮುಕ್ತಗೊಳಿಸಿ ಅವರು ಮಾತನಾಡಿದರು.
ಮೇಲ್ಸೇತುವೆಯ ಕೆಲಸ ಪ್ರಗತಿಯಲ್ಲಿದ್ದ ಕಾರಣ ಕೆಳಭಾಗದ ಸರ್ವಿಸ್​ ರಸ್ತೆಯು ಮಳೆ ಹಾಗೂ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ಕಷ್ಟಕರವಾಗಿತ್ತು. ಈಗ ಮೇಲ್ಸೇತುವೆ ತೆರೆದಿರುವುದರಿಂದ ವಾಹನದ ಒತ್ತಡ ಕಡಿಮೆಯಾಗಲಿದೆ. ಸರ್ವಿಸ್​ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಎರಡು ಮೂರು ದಿನಗಳಲ್ಲಿ ಮೇಲ್ಸೇತುವೆಯ ಬಹುತೇಕ ಕೆಲಸಗಳು ಪೂರ್ಣಗೊಳ್ಳಲಿದ್ದು, ಬುಧವಾರದಿಂದ ಕೆಳಗಿನ ಅಂಡರ್​ ಪಾಸ್​ ಹಾಗೂ ಸರ್ವಿಸ್​ ರಸ್ತೆಯ ರಿಪೇರಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. 24 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ ಎಂದರು.
ಮಣ್ಣು ಕುಸಿತಕ್ಕೆ ತಡೆಗೋಡೆ
ಕಟಪಾಡಿ ಭಾಗದ ಮೇಲ್ಸೇತುವೆಯ ಎಡಭಾಗದಲ್ಲಿ ಮಣ್ಣು ಕುಸಿಯುವ ಆತಂಕವಿರುವ ಕಾರಣ, ಅದಕ್ಕೆ ಮುನ್ನೆಚ್ಚರಿಕೆಯಾಗಿ ಮೊದಲಿಗೆ ತಡೆಗೋಡೆ ನಿಮಾರ್ಣ ಕೆಲಸ ಪ್ರಗತಿಯಲ್ಲಿದೆ. ಅಪಘಾತ ನಿಯಂತ್ರಣ ಹಾಗೂ ರಸ್ತೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ಏನಾದರೂ ಸಮಸ್ಯೆ ಅಥವಾ ದೂರುಗಳಿದ್ದರೆ ಈ ತಂಡಕ್ಕೆ ತಿಳಿಸಬಹುದು ಎಂದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಅಂಬಲಪಾಡಿ ಸೇತುವೆಯಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಉಡುಪಿ ನಗರಕ್ಕೆ ಹೊಸ ರೂಪ ಸಿಕ್ಕಂತಾಗಿದೆ. ಅಂಬಲಪಾಡಿ ಭಾಗದ ದಟ್ಟಣೆಗೆ ಪರಿಹಾರ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿಯ ಸುಂದರೀಕರಣ ಹಾಗೂ ಬೀದಿ ದೀಪಗಳ ವ್ಯವಸ್ಥೆಯನ್ನು ತಕ್ಷಣವೇ ಮಾಡಲಾಗುವುದು. ಇದರಿಂದಾಗಿ ಕುಂದಾಪುರದಿಂದ ಮಂಗಳೂರಿಗೆ ಹೋಗುವ ಸಾರ್ವಜನಿಕರಿಗೆ ಸಂತೆಕಟ್ಟೆ, ಕರಾವಳಿ ಜಂಕ್ಷನ್​ ಹಾಗೂ ಅಂಬಲಪಾಡಿ ಭಾಗದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಹೇಳಿದರು.

ಮಾಜಿ ನಗರಸಭಾ ಸದಸ್ಯ ಹರೀಶ್​ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಉಪಾಧ್ಯಕ್ಷ ಗಜೇಂದ್ರ ಎಸ್​ ಪೇಲೆಮನೆ, ಪ್ರಧಾನ ಕಾರ್ಯದರ್ಶಿ ಅಭಿರಾಜ ಸುವರ್ಣ, ಪ್ರದಿಪ್​ ಕುಂದರ್​ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net