ನಕ್ಸಲ್ ಚಟುವಟಿಕೆಗೆ ಆಲ್ಚಿ ಸಿಂಹಸ್ವಪ್ನ!

 ಸೇವಾ ನಿವೃತ್ತಿ ಪಡೆದ ಆಲ್ಚಿ.
ಸೇವಾ ನಿವೃತ್ತಿ ಪಡೆದ ಆಲ್ಚಿ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಳೆದ ಎಂಟು ವರ್ಷಗಳಿಂದ ಅತ್ಯಂತ ನಿಷ್ಠೆ, ಶಿಸ್ತು ಮತ್ತು ಅಪ್ರತಿಮ ಕಾರ್ಯಕ್ಷಮತೆಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆ್ಯಂಟಿ ನಕ್ಸಲ್ ಫೋರ್ಸ್(ಎಎನ್‌ಎಫ್)ಡಿಚಿ ಸೇವೆ ಸಲ್ಲಿಸಿದ್ದ ‘ಆಲ್ಚಿ’ಗೆ ಈಗ ನಿವೃತ್ತಿಯ ಸಂಭ್ರಮ. ಕೂಂಬಿಂಗ್, ಶೋಧ ಹಾಗೂ ಭದ್ರತಾ ಕರ್ತವ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಣೆಗೆ ‘ಆಲ್ಚಿ’ ಖುದ್ದು ಮಾರ್ಗದರ್ಶನ ನೀಡುವ ಮೂಲಕ ಆಗುಂಬೆ, ಹೆಬ್ರಿ, ಜಯಪುರ, ಶೃಂಗೇರಿ, ಕೊಲ್ಲೂರು, ಸುಬ್ರಹ್ಮಣ್ಯ, ಮಡಿಕೇರಿ ಸೇರಿದಂತೆ ನಕ್ಸಲ್ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಸಿಂಹಸ್ವಪ್ನವಾಗಿದ್ದಳು.
ಹೌದು...! ಅಷ್ಕಕ್ಕೂ ಈಕೆ ಬೇರ‌್ಯಾರೂ ಅಲ್ಲ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆ್ಯಂಟಿ ನಕ್ಸಲ್ ಫೋರ್ಸ್ ಶ್ವಾನ ದಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಹೆಣ್ಣು ಶ್ವಾನ. ಈಕೆ ತನ್ನ ವೃತ್ತಿ ಜೀವನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗೌರವಯುತವಾಗಿ ನಿವೃತ್ತಿ ಪಡೆದಿದ್ದಾಳೆ.

ಮೂರು ತಿಂಗಳಲ್ಲೇ ಫೀಲ್ಡಿಗೆ

2018ರ ಆಗಸ್ಟ್ 11ರಂದು ಜನಿಸಿದ ಆಲ್ಚಿ ಮೂರು ತಿಂಗಳ ವಯಸ್ಸಿನಲ್ಲೇ 2018ರ ನ.10ರಂದು ಎಎನ್‌ಎಫ್‌ಗೆ ಸೇರ್ಪಡೆಗೊಂಡಳು. ಬೆಂಗಳೂರಿನ ಸಿಆರ್‌ಪಿಎಫ್ ಡಾಗ್ ಬ್ರೇಡಿಂಗ್ ಆ್ಯಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ 13 ತಿಂಗಳು ಕಠಿಣ ತರಬೇತಿ ಪಡೆದು ಸ್ಫೋಟಕ ಪತ್ತೆ, ಅಸಾಲ್ಟ್ ಕಾರ್ಯಾಚರಣೆಗಳಲ್ಲಿ ಪರಿಣತಿ ಪಡೆದಿದ್ದಳು. ಐಇಡಿ ಪತ್ತೆ, ಬಾಂಬ್ ಶೋಧನೆ, ಪ್ಯಾಟ್ರೋಲಿಂಗ್ ಹಾಗೂ ಅರಣ್ಯ ಕಾರ್ಯಾಚರಣೆಯಲ್ಲಿಯೂ ವಿಶೇಷ ತರಬೇತಿ ಪಡೆದಿದ್ದಳು. ತರಬೇತಿ ಪೂರ್ಣಗೊಂಡ ಬಳಿಕ ಕಾರ್ಕಳ ಘಟಕಕ್ಕೆ ನಿಯೋಜನೆಗೊಂಡಿದ್ದಳು.
ಆಲ್ಚಿಯ ಸೇವಾ ಬದುಕು ಬಹುಪಾಲು ಪಶ್ಚಿಮಘಟ್ಟದ ಅರಣ್ಯಗಳಲ್ಲೇ ಕಳೆದಿತ್ತು. ಆಗುಂಬೆ, ಹೆಬ್ರಿ, ಜಯಪುರ, ಶೃಂಗೇರಿ, ಕೊಲ್ಲೂರು, ಸುಬ್ರಹ್ಮಣ್ಯ, ಮಡಿಕೇರಿ ಸೇರಿದಂತೆ ನಕ್ಸಲ್ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಕೂಂಬಿಂಗ್, ಶೋಧ ಹಾಗೂ ಭದ್ರತಾ ಕರ್ತವ್ಯಗಳಲ್ಲಿ ಅವಳು ಮುಂಚೂಣಿಯಲ್ಲಿದ್ದಳು. ಆಲ್ಚಿ ನಿವೃತ್ತಿಯಾದರೂ ಶ್ವಾನದಳದಲ್ಲಿ ಅಮರಿ, ಆಗೆರಾ ಹಾಗೂ ಆಂಜಿ ಎಂಬ ಶ್ವಾನಗಳು ಸೇವೆಯಲ್ಲಿವೆ.

ಶೋಧ ಕಾರ್ಯಕ್ಕೂ ಸೈ

ಐಇಡಿ ಶೋಧನೆ, ಅಪಾಯಕಾರಿ ಪ್ರದೇಶಗಳ ಪರಿಶೀಲನೆ, ಅರಣ್ಯದೊಳಗಿನ ಅಸಾಲ್ಟ್ ಕಾರ್ಯಾಚರಣೆ, ಪ್ಯಾಟ್ರೋಲಿಂಗ್ ಹಾಗೂ ನಕ್ಸಲ್ ಚಲನವಲನದ ಶೋಧ ಕಾರ್ಯಗಳಲ್ಲಿ ಆಲ್ಚಿ ಅತ್ಯುತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದಳು.

ನಿರ್ಣಾಯಕ ಪಾತ್ರ

ತನ್ನ ಸೇವಾ ಅವಧಿಯಲ್ಲಿ ‘ಆಲ್ಚಿ’ ಕರ್ನಾಟಕದ ವಿವಿಧ ನಕ್ಸಲ್ ಪೀಡಿತ ಅರಣ್ಯ ಪ್ರದೇಶಗಳಲ್ಲಿ, ವಿಶೇಷವಾಗಿ ದಟ್ಟ ಅರಣ್ಯ ಪ್ರದೇಶ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಸಲಾದ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಳು. ಸ್ಫೋಟಕ ವಸ್ತುಗಳ ನಿಖರ ಪತ್ತೆ ಮೂಲಕ ಭದ್ರತಾ ಪಡೆಗೆ ಅಮೂಲ್ಯ ಸಹಕಾರ ನೀಡಿದ್ದಳು. ಈ ಎಲ್ಲ ಕಾರ್ಯಗಳಲ್ಲಿ ‘ಆಲ್ಚಿ’ ಪ್ರದರ್ಶಿಸಿದ ಧೈರ್ಯ ಅನೇಕ ಕಾರ್ಯಾಚರಣೆಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು.

ವಿಐಪಿ ಭದ್ರತೆಯಲ್ಲೂ ಸೇವೆ

ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಾರ್ಕಳ ಹಾಗೂ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದಾಗ ವಿಐಪಿ ಭದ್ರತೆ, ಬಾಂಬ್ ಪತ್ತೆ ಹಾಗೂ ಭದ್ರತಾ ಪರಿಶೀಲನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿತ್ತು. ಹ್ಯಾಂಡ್ಲರ್‌ಗಳಾದ ಪ್ರದೀಪ್ ಬಿ.ಡಿ., ಧನಂಜಯ್ ಕಾಳಜಿ, ಸಮರ್ಪಣೆ ಮತ್ತು ವೃತ್ತಿಪರತೆಯಿಂದ ಆಲ್ಚಿಯನ್ನು ನಿರ್ವಹಿಸಿದ್ದರು. ದೇಶದ ಭದ್ರತೆಗಾಗಿ ನೇಪಥ್ಯದಲ್ಲಿ ನಿಂತು ಸೇವೆ ಸಲ್ಲಿಸಿದ ಆಲ್ಚಿಗೆ ಕರ್ನಾಟಕ ರಾಜ್ಯ ಪೊಲೀಸ್ ಆ್ಯಂಟಿ ನಕ್ಸಲ್ ಫೋರ್ಸ್ ಗೌರವಪೂರ್ವಕ ವಂದನೆ ಸಲ್ಲಿಸಿದೆ.

ಶ್ವಾನಗಳು ಕೇವಲ ಪೊಲೀಸ್ ಪಡೆಯ ಭಾಗವಲ್ಲ, ಇಲಾಖೆಯ ಧೈರ್ಯಶಾಲಿ ಸಹ ಯೋಧರು. ಆಲ್ಚಿ ತನ್ನ ಸೇವಾವಧಿಯಲ್ಲಿ ಪ್ರದರ್ಶಿಸಿದ ಧೈರ್ಯ, ಸಾಹಸ ಮತ್ತು ಕರ್ತವ್ಯ ನಿಷ್ಠೆ ಸದಾ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ಆಕೆಯ ಸೇವೆಯನ್ನು ಎಎನ್‌ಎಫ್ ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ.

— ಹರಿರಾಮ್ ಶಂಕರ್ ಕಾರ್ಕಳ ಎಎನ್‌ಎಫ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net