ಬಾಕಿಮಾರು ಗದ್ದೆಯಲ್ಲಿ ಕೃಷಿ ಪಾಠ

 ಇರುವೈಲಿನ ಬಾಕಿಮಾರು ಗದ್ದೆಯಲ್ಲಿ ಕುಪ್ಪೆಪದವು ಕಾವೇರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.
ಇರುವೈಲಿನ ಬಾಕಿಮಾರು ಗದ್ದೆಯಲ್ಲಿ ಕುಪ್ಪೆಪದವು ಕಾವೇರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಕುಪ್ಪೆಪದವು ಕಾವೇರಿ ಆಂಗ್ಲ ಮಾಧ್ಯಮ ಶಾಲೆಯ 180 ವಿದ್ಯಾರ್ಥಿಗಳು ತಾಲೂಕಿನ ಇರುವೈಲಿನ ದಿಡ್ಡು ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ಮೂಲ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.
ಇರುವೈಲು ಗ್ರಾಪಂ ಮಾಜಿ ಸದಸ್ಯ ವಲೇರಿಯನ್ ಕುಟಿನ್ಹಾ, ಹಿಂದಿನ ಕಾಲದಲ್ಲಿ ಜನರು ತಾವೇ ಭತ್ತ ಬೆಳೆದು ಅಕ್ಕಿ ಉತ್ಪಾದಿಸುತ್ತಿದ್ದರು. ಭತ್ತ ಬೆಳೆಯಲು ಅಪಾರ ಶ್ರಮ ಅಗತ್ಯ. ಇಂದು ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗುತ್ತಿರುವುದು ಬೇಸರದ ಸಂಗತಿ. ಕೃಷಿಕರ ಪರಿಶ್ರಮವನ್ನು ವಿದ್ಯಾರ್ಥಿಗಳು ನೇರವಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಶಿಕ್ಷಕಿ ಶಾಲೆಟ್ ವಾಸ್, ಗದ್ದೆಯ ಮಾಲೀಕ ಪ್ರಭಾಕರ ಪೂಜಾರಿ ದಿಡ್ಡು ಮಾತನಾಡಿದರು. ಹಿರಿಯ ಯಮುನಾ ಮಜ್ಜಿಗುರಿ ಪಾಡ್ದನ ಹಾಡಿನ ಮೂಲಕ ಭತ್ತ ನಾಟಿಯ ಸಂಪ್ರದಾಯ ಪರಿಚಯಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಗದ್ದೆಗೆ ಇಳಿದು ನೇಜಿ ನಾಟಿಯಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿನಿಯರಾದ ಶರಣ್ಯ, ನೀಕ್ಷಾ ರಾಜ್ಯ ಸರ್ಕಾರ ರೈತರಿಗೆ ಬೆಳೆಗಳಿಗೆ ನ್ಯಾಯಯುತ ಬೆಲೆ, ಪ್ರಕೃತಿ ವಿಕೋಪದಿಂದಾಗುವ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದರು. ವಿದ್ಯಾರ್ಥಿಗಳಾದ ನಿಶಿತಾ, ನಿಶಾಂತ್ ರೈತರಿಗೆ ಉತ್ತಮ ನೀರಾವರಿ ಸೌಲಭ್ಯ, ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು. ವಕೀಲ ಧನಂಜಯ ಶೆಟ್ಟಿ ದೊಡ್ಡಗುತ್ತು ಆಹಾರ ವ್ಯವಸ್ಥೆ ಕಲ್ಪಿಸಿದರು. ಕೃಷಿಕ ಪ್ರಸಾದ್ ಶೆಟ್ಟಿ, ಧರ್ಮಣ ಪೂಜಾರಿ ಕುಕ್ಕಿಮಾರ್, ಲಕ್ಷ್ಮಣ ಮಜ್ಜಿಗುರಿ, ಶಿಕ್ಷಕರು ಉಪಸ್ಥಿತರಿದ್ದರು.ಪ್ರಭಾಕರ ಪೂಜಾರಿ ದಿಡ್ಡು ಹದಗೊಳಿಸಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಪ್ರಾಯೋಗಿಕ ತರಬೇತಿ ನೀಡಲಾಯಿತು.

ತರಗತಿಯ ನಾಲ್ಕು ಗೋಡೆಗಳ ಆಚೆಗಿನ ಬದುಕನ್ನು ವಿದ್ಯಾರ್ಥಿಗಳು ಅರಿಯಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿಕರ ಜೀವನ, ಭತ್ತ ನಾಟಿ, ಗ್ರಾಮೀಣ ಸಂಸ್ಕೃತಿಯ ಅನುಭವ ಮಕ್ಕಳಿಗೆ ದೊರಕುವಂತೆ ಶಾಲೆ ಪೋಷಕ ಪ್ರಭಾಕರ ಪೂಜಾರಿ ದಿಡ್ಡು ಅವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಗಿದೆ.

— ಶಾಲೆಟ್ ವಾಸ್, ಮುಖ್ಯ ಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net