ಶಿಮಂತೂರು ಪರಿಸರದಲ್ಲಿ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
Published on:
Copied
Follow Us
ಮೂಲ್ಕಿ: ಈ ವರ್ಷದ ಮಳೆಗಾಲದಲ್ಲಿ ಮಳೆಯ ಕೊರತೆ ಹಾಗೂ ಬಿರುಗಾಳಿಯ ನಡುವೆ ಕೃಷಿ ಕಾರ್ಯ ಆಮೆಗತಿಯಲ್ಲಿ ಆರಂಭಗೊಂಡಿದೆ. ಸರಿಯಾಗಿ ಮಳೆ ಬೀಳದ ಕಾರಣ ಎತ್ತರದ (ಬೊಟ್ಟು) ಬಯಲು ಪ್ರದೇಶದಲ್ಲಿ ನೀರಿನ ಕೊರತೆಯಾಗಿದ್ದು, ಬತ್ತದ ಕೃಷಿ ಕಾರ್ಯದಲ್ಲಿ ರೈತ ಆಸಕ್ತಿ ಕಳೆದುಕೊಂಡಿರುವುದು ಸಮಸ್ಯೆಯಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯ ಶಿಮಂತೂರು ಪ್ರದೇಶದಲ್ಲಿ ಮಳೆಯ ಕೊರತೆ ನಡುವೆ ಬಾವಿಯ ನೀರನ್ನು ಪಂಪ್ ಮೂಲಕ ಹಾಯಿಸಿ ಕೃಷಿ ಚಟುವಟಿಕೆ ಪ್ರಾರಂಭಿಸಲಾಗಿದೆ.
ತಾಲೂಕಿನ ಪ್ರಧಾನ ಕೃಷಿ ಪ್ರದೇಶಗಳಾದ ಶಿಮಂತೂರು, ಅತಿಕಾರಿ ಬೆಟ್ಟು, ಬಳ್ಕುಂಜೆ, ತೋಕೂರು, ಕಿಲೆಂಜೂರು, ಪಕ್ಷಿಕೆರೆ, ಹಳೆಯಂಗಡಿ, ಚಿತ್ರಾಪು ಪ್ರದೇಶಗಳಲ್ಲಿ ಮಳೆಯ ಕೊರತೆ ನಡುವೆಯೂ ಕೃಷಿ ಚಟುವಟಿಕೆ ನಡೆಯುತ್ತಿದೆ.
ಚಾಪೆ ನೇಜಿ ಬಗ್ಗೆ ಆಸಕ್ತಿ ಕೊರತೆ
ಬಹಳ ಪ್ರಸಿದ್ಧಿಗೆ ಬಂದ ಚಾಪೆ ನೇಜಿ ಮತ್ತು ಯಾಂತ್ರೀಕೃತ ನೇಜಿ ನೆಡುವ ಕಾರ್ಯಕ್ಕೆ ರೈತರು ಹೆಚ್ಚಿನ ಆಸಕ್ತಿ ತೋರಿಸದೆ ಸಾಂಪ್ರದಾಯಿಕ ನೇಜಿಯನ್ನು ಬಳಸುತ್ತಿದ್ದಾರೆ. ಕೃಷಿಕರು ಮಳೆಯ ನೀರನ್ನು ಅವಲಂಬಿಸಿದ್ದು, ಈ ಬಾರಿ ಮಳೆಯ ಕೊರತೆ ಹಾಗೂ ಬಿರು ಬಿಸಿಲು ಗದ್ದೆ ಒಣಗಿಸಿ ನೇಜಿ ಹಾಳಾಗುವಂತೆ ಮಾಡುತ್ತಿದೆ. ಕಳೆದ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಭಾರಿ ಮಳೆಯಾಗಿದ್ದು, ಕೃಷಿ ಕಾರ್ಯ ಆರಂಭವಾಗಿ ಉತ್ತಮ ಫಸಲು ಬಂದಿತ್ತು. ಈ ಬಾರಿ ಜುಲೈ ತಿಂಗಳ ಮೊದಲ ವಾರ ಬಂದರೂ ಸರಿಯಾಗಿ ಮಳೆಯಾಗಿಲ್ಲ, ಇದರಿಂದ ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ.
ಚೌತಿಗೆ ಕದಿರು ಸಮಸ್ಯೆ
ಚೌತಿ ಸಂದರ್ಭ ಎಲ್ಲ ದೇಗುಲಗಳು ಹಾಗೂ ಮನೆಗಳಲ್ಲಿ ಕದಿರು ತುಂಬಿಸುವ ಕಾರ್ಯ ನಡೆಯಬೇಕಿದ್ದು, ಈ ಬಾರಿ ಕದಿರಿನ ಲಭ್ಯತೆಯ ಬಗ್ಗೆ ಸಂಶಯ ಉಂಟಾಗಿದೆ. ಕೆಲವು ಕಡೆಗಳಲ್ಲಿ ಬಾವಿಯ ನೀರು ಹಾಯಿಸಿ ಕೃಷಿ ಆರಂಭಿಸಿದ್ದರೂ ಬಿಸಿಲಿನ ಹೊಡೆತ ನೀರಿನಲ್ಲಿ ನಂಜು ಉತ್ಪತ್ತಿಯಾಗುವ ಕಾರಣ ಸಮಸ್ಯೆ ಉಂಟಾಗಿದೆ.
ಈ ಬಾರಿ ಮಳೆಯ ಕೊರತೆಯಿಂದ ಕೃಷಿಗೆ ತೀವ್ರ ಹಿನ್ನಡೆಯಾಗಿದೆ. ಕೊಳವೆ ಬಾವಿ ಅಥವಾ ಬಾವಿಯ ನೀರನ್ನು ಅವಲಂಬಿಸುವ ಪರಿಸ್ಥಿತಿ ಬಂದಿದೆ. ಮಳೆ ಇಲ್ಲದಿದ್ದರೆ ಕೃಷಿ ಬಹಳ ಕಷ್ಟ.