ವರುಣನ ಕೃಪೆಗೆ ಕೃಷಿ ಚುರುಕು

 ಕೋಟ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಕಾಯಕ ಚುರುಕು
ಕೋಟ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಕಾಯಕ ಚುರುಕು
Published on
ವಿಜಯವಾಣಿ ಸುದ್ದಿಜಾಲ ಕೋಟ
ಕೋಟ ಹೋಬಳಿ ವ್ಯಾಪ್ತಿಯಲ್ಲಿ ವರುಣನ ಕೃಪೆ ಆರಂಭಗೊಳ್ಳುತ್ತಿದ್ದಂತೆ ಕೃಷಿ ಕಾಯಕಕ್ಕೆ ರೈತ ಸಮುದಾಯ ಮುನ್ನುಡಿ ಇಡುತ್ತಿದ್ದಾರೆ. ಮೇ ಎರಡನೇ ವಾರದಲ್ಲಿ ಹೋಬಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿತ್ತನೆಗಾಗಿ ಉಳುಮೆ ಕಾರ್ಯಕ್ಕೆ ರೈತ ಸಮುದಾಯ ವೇಗ ನೀಡುವುದು ಸಾಮಾನ್ಯ. ಆದರೆ ಈ ಬಾರಿ ವರುಣನ ಕೃಪೆ ಮೇ ಮೊದಲ ವಾರದಿಂದ ಆಗಿರುವುದರಿಂದ ರೈತ ಸಮುದಾಯದಲ್ಲಿ ಕೃಷಿ ಉತ್ಸಾಹ ಹೆಚ್ಚಿಸಿದೆ.


ಉಳುಮೆಗಾಗಿ ಯಂತ್ರಗಳ ಮೊರೆ

ಸಾಂಪ್ರದಾಯಿಕ ಉಳುಮೆ ಕಾರ್ಯ ಮರೀಚಿಕೆಯಾದ ಹಿನ್ನೆಲೆ ಇದೀಗ ಕೆಲ ವರ್ಷಗಳಿಂದ ಯಂತ್ರಗಳ ಮೋರೆ ಹೋಗುತ್ತಿರುವ ರೈತರು ಟ್ರಾೃಕ್ಟರ್, ಟಿಲ್ಲರ್‌ಗಳನ್ನು ಅವಲಂಬಿಸಿದ್ದಾರೆ. ಅದರೊಂದಿಗೆ ಸಾಂಪ್ರದಾಯಿಕ ಕೋಣಗಳ ಉಳುಮೆ ಇತಿಹಾಸ ಪುಟ ಸೇರಿಕೊಂಡಿದೆ.

ಮಳೆ ಪ್ರಮಾಣ ಕಡಿಮೆ

ಈವರೆಗೆ ಕೋಟ ಹೋಬಳಿ ಭಾಗದ ಅಲ್ಲಲ್ಲಿ ಮಳೆ ತೀರ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು, ಇನ್ನಷ್ಟು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಮಳೆ ಪ್ರಮಾಣ ಹೆಚ್ಚಿದಲ್ಲಿ ಬಿತ್ತನೆ ಕಾರ್ಯಕ್ಕೆ ಯೋಗ್ಯ ವಾತಾವರಣ ನಿರ್ಮಾಣಗೊಳ್ಳಲಿದೆ. ಕೋಟ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 4,250 ಹೆಕ್ಟೇರ್ ಭತ್ತದ ಕೃಷಿ ಭೂಭಾಗ ಇದ್ದು ಈಗಾಲೇ ಬೀಜೋತ್ಪನ್ನ ಶೇಖರಿಸಲಾಗಿದೆ.

ಎಂ.ಒ 4 ಬಿತ್ತನೆ ಬೀಜ ಶೇಖರಣೆ

ಕೋಟ ಹೋಬಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಎಂ.ಒ 4 ಭತ್ತದ ತಳಿಗೆ ವಿಪರೀತ ಬೇಡಿಕೆ ಇದ್ದು ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 160 ಕ್ವಿಂಟಾಲ್ ದಾಸ್ತಾನು ಇರಿಸಿ ವಿತರಿಸುವ ಕಾರ್ಯ ಕೈಗೊಂಡಿದೆ.

ಕೋಟ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಉಳುಮೆ ಕಾರ್ಯ ಮುಗಿಸಿ ಬಿತ್ತನೆಗೆ ರೈತ ಸಮುದಾಯ ಅಣಿಯಾಗಿದ್ದಾರೆ. ಮಳೆ ಪ್ರಮಾಣ ನೋಡಿ ಬಿತ್ತನೆ ಕಾರ್ಯಕ್ಕೆ ವೇಗ ನೀಡಲಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಎಂ.ಒ 4 ಭತ್ತದ ತಳಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ 160 ಕ್ವಿಂಟಾಲ್ ದಾಸ್ತಾನು ಶೇಖರಿಸಿ ವಿತರಿಸಲಾಗುತ್ತಿದೆ.

— ಸುರೇಶ್ ಬಂಗೇರ ಕೋಟ ಬ್ರಹ್ಮಾವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ

ಕರಾವಳಿ ಭಾಗದಲ್ಲಿ ಈ ಬಾರಿ ವರಣರಾಯನ ಕೃಪೆಯ ಮನ್ಸೂಚನೆ ಮುಂಚಿತವಾಗಿ ಲಭಿಸಿದೆ. ಸಾಮಾನ್ಯವಾಗಿ ಬಿತ್ತನೆ ಕಾರ್ಯಕ್ಕಾಗಿ ಎಂಒ 4 ತಳಿ ಆಯ್ಕೆಗೊಳಿಸಿದ್ದು ಹಲವೆಡೆ ಉಳುಮೆ ಕಾರ್ಯ ಪೂರ್ಣಗೊಂಡಿದೆ. ಮಳೆಯ ಪ್ರಮಾಣ ನೋಡಿ ಬಿತ್ತನೆ ಕಾರ್ಯ ಪೂರ್ಣಗೊಳಿಸಲಿದ್ದಾರೆ.

— ಎಂ.ಜಯರಾಮ ಶೆಟ್ಟಿ ಅಧ್ಯಕ್ಷ, ರೈತಧ್ವನಿ ಸಂಘಟನೆ ಕೋಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net